ಕರ್ನಾಟಕ

karnataka

By

Published : Jul 31, 2019, 10:04 AM IST

ETV Bharat / city

ಮಳೆ ಇಲ್ಲದೆ ಕೈಕಟ್ಟಿ ಕುಳಿತ ರೈತರು.. ಕೃಷಿ ಇಲಾಖೆಯಿಂದ‌ ಪರ್ಯಾಯ ವ್ಯವಸ್ಥೆ..

ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರು ಮುಂಗಾರು ಮಳೆ ಆಗದ ಹಿನ್ನೆಲೆ ಕೈಕಟ್ಟಿ ಕುಳಿತಿದ್ದು, ರೈತರು ಬಿತ್ತನೆ ಮಾಡಲು ತಡವಾದ್ರೆ, ಅವರಿಗೆ ಪರ್ಯಾಯವಾಗಿ ಬೇಗ ಬೆಳೆ ಬರುವಂತೆ ಬೀಜಗಳನ್ನು ನೀಡಲಾಗುತ್ತದೆ ಎಂದು ಉಪ ಕೃಷಿ ನಿರ್ದೇಶಕಿ ವಿನುತಾ ತಿಳಿಸಿದ್ದಾರೆ.

ಮಳೆ ಇಲ್ಲದೆ ಕೈಕಟ್ಟಿ ಕುಳಿತ ರೈತರು

ಬೆಂಗಳೂರು: ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಸಂಕಷ್ಟದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರಿಗೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೆ, ಕೃಷಿ ಇಲಾಖೆಯು ರೈತರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.

ಜೂನ್ ತಿಂಗಳಲ್ಲಿ ಒಂದು ಎರಡು ದಿನ ಜಿಲ್ಲೆಯಲ್ಲಿ ಮಳೆಯಾಗಿತ್ತು. ಬಳಿಕ ಜುಲೈ ತಿಂಗಳವರೆಗೂ ಮಳೆಯಾಗದೇ ಕೇವಲ ಗಾಳಿಯಿಂದ ರೈತರಿಗೆ ಸಂಕಷ್ಟ ತಂದಿದ್ದು, ಜುಲೈ ತಿಂಗಳ ಮಧ್ಯದಲ್ಲಿ ಮತ್ತೆ ಮಳೆ ಸುರಿದಿದೆ. ಹೀಗಾಗಿ ರೈತರು ಭೂಮಿ ಹದ ಮಾಡಿ, ಬಿತ್ತನೆಗೆ ಸಜ್ಜು ಮಾಡಿಕೊಂಡಿದ್ದಾರೆ. ಆದರೆ, ತಿಂಗಳ ಅಂತ್ಯದಲ್ಲಿ ಮಳೆ ಬಾರದೇ ರೈತರು ಬಿತ್ತನೆ ಕೂಡ ಮಾಡದೇ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಹೀಗಾಗಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನೂ ರೈತರಿಗೆ ಕಲ್ಪಿಸಲು ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.

ಸಂಕಷ್ಟದಲ್ಲಿರುವ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಕೃಷಿ ಇಲಾಖೆ..

ಪ್ರಸಕ್ತ ವರ್ಷದಲ್ಲಿ ಕೃಷಿ ಇಲಾಖೆಯು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ ಏಕದಳ ಧಾನ್ಯಗಳಾದ ಭತ್ತ, ಮೆಕ್ಕೆ ಜೋಳ, ಸಜ್ಜೆ, ದ್ವಿದಳ ಧಾನ್ಯಗಳಾದ ತೊಗರಿ, ಉದ್ದು, ಹೆಸರು, ಹುರಳಿ, ಅವರೆ, ಅಲಸಂದಿ ಬೆಳೆಗಳು ಸೇರಿದಂತೆ ಮಳೆಯಾಶ್ರಿತ ಹಾಗೂ ನೀರಾವರಿ ಆಧಾರದ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಬೆಂ. ಗ್ರಾ. ಜಿಲ್ಲೆ ಬಯಲು ಸೀಮೆಯಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶ ಆದ ಬಳಿಕ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಮಳೆಯನ್ನು ಅವಲಂಭಿಸಿ ರಾಗಿ ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಕಡಿಮೆ:

ಈಗಾಗಲೇ ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಒಂದಿಷ್ಟು ಮಳೆಯಾಗಿದೆ. ಇನ್ನೂ ಒಂದಿಷ್ಟು ಮಳೆ ಬಂದರೆ, ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಬಿತ್ತನೆಗೆ ಯಾವುದೇ ತೊಂದರೆಯಾಗದಂತೆ ರೈತರಿಗೆ ಸೂಕ್ತ ಸಮಯದಲ್ಲಿ ಬೀಜ, ರಸಗೊಬ್ಬರ ವಿತರಣೆಗಾಗಿ ಕೃಷಿ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ. ಆದರೆ, ಕಳೆದ ವರ್ಷ ಇದೇ ಸಮಯದಲ್ಲಿ ಶೇ. 33ರಷ್ಟು ಬಿತ್ತನೆಯಾಗಿದ್ದು, ಈ ಸಲಕ್ಕಿಂತ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷ ಇದುವರೆಗೂ ಸರಿಯಾಗಿ ಮಳೆಯಾಗದೆ ಕೇವಲ ಶೇ. 3ರಷ್ಟು ಜನ ಬಿತ್ತನೆ ಮಾಡಿದ್ದಾರೆ.‌ ಅದು ಕೂಡ ಕೊಳವೆ ಬಾವಿ ನೀರಿನಿಂದ ಬಿತ್ತನೆ ಮಾಡಿರುವವರೇ ಶೇ. 3ರಷ್ಟು ಇದ್ದಾರೆ. ಜೂನ್ ಮತ್ತು ಜುಲೈನಲ್ಲಿ ಕೆಲವೊಂದು ಕಡೆ ಉತ್ತಮ ಮಳೆಯಾದ್ರೆ, ಕೆಲವೊಂದು ಕಡೆ ಸಾಧಾರಣ ಹಾಗೂ ಇನ್ನೂ ಹಲವು ಕಡೆ ಮಳೆಯೇ ಆಗಿಲ್ಲ ಎನ್ನುತ್ತಾರೆ ಬೆಂ. ಗ್ರಾ. ಜಿಲ್ಲೆಯ ಉಪ ಕೃಷಿ ನಿರ್ದೇಶಕಿ ವಿನುತಾ. ಅದೇ ರೀತಿ ಮಳೆಯಿಂದ ರೈತರು ಬಿತ್ತನೆ ಮಾಡಲು ತಡವಾದ್ರೆ, ಅವರಿಗೆ ಪರ್ಯಾಯವಾಗಿ ಬೇಗ ಬೆಳೆ ಬರುವಂತೆ ಬೀಜಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ‌ ನೀಡಿದರು.

ಬೆಳೆ ನಷ್ಟಕ್ಕೆ ವಿಮೆ ಸೌಲಭ್ಯ:

ಮಳೆಯಾಶ್ರಿತ ಬೆಳೆಗಳಿಗೆ ವಿಮೆ ಸೌಲಭ್ಯವಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿ ಬೆಳೆ ನಾಶವಾದಲ್ಲಿ ವಿಮೆ ಸೌಲಭ್ಯದಿಂದ ಸರ್ಕಾರ ಪರಿಹಾರ ನೀಡಲಿದೆ. ಇದಕ್ಕೆ ರೈತರು ಹತ್ತಿರವಿರುವ ಯಾವುದೇ ಬ್ಯಾಂಕ್ ಆದರೂ ಸರಿ, ಅಲ್ಲಿಗೆ ಹೋಗಿ ಜಮೀನಿನ ಆರ್​ಟಿಸಿ ಮತ್ತು ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ನಂಬರ್​ ನೀಡಿ ಅಪ್ಲಿಕೇಶನ್ ಹಾಕಬೇಕು. ಇದರ ಜೊತೆಯಲ್ಲಿ ಒಂದು ಹೆಕ್ಟೇರ್​ಗೆ 304 ರೂ.ಗಳನ್ನು ಪಾವತಿಸಬೇಕು. ಇದರಿಂದ ಬೆಳೆ ನಾಶವಾದಲ್ಲಿ ಒಂದು ಹೆಕ್ಟೇರಿಗೆ 15 ಸಾವಿರ ರೂ. ವಿಮೆ ಬರುತ್ತದೆ. ಇದಕ್ಕೆ ಅಗಸ್ಟ್ 14 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ವಿನುತಾರವರು ಮನವಿ ಮಾಡಿದ್ದಾರೆ.

ABOUT THE AUTHOR

...view details