ಬೆಂಗಳೂರು: ಒಮಿಕ್ರಾನ್ ತಡೆಯಲು ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಡಿಸೆಂಬರ್ 28 ರಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿರುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಜ್ಞರ ಸಮಿತಿ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಒಮಿಕ್ರಾನ್ ಯಾವ ರೀತಿಯಲ್ಲಿ ಹರಡಿದೆ ಎಂದು ಬೇರೆ ದೇಶ ಮತ್ತು ರಾಜ್ಯಗಳ ಅಧ್ಯಯನ ಮಾಡಿ, ನಮ್ಮ ರಾಜ್ಯದಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ 10 ದಿನಗಳ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿದ್ದು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧವಿರಲಿದೆ ಎಂದರು.
ಮೊದಲಿಗೆ ಪಬ್, ಬಾರ್, ಹೋಟೆಲ್‌ಗೆ ಮಾತ್ರ ಆಸನ ಸಾಮರ್ಥ್ಯದ ಶೇ. 50ಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ, ಸಿನಿಮಾಗೆ ಶೇ.50 ಆಸನ ನಿಯಮ ಅನ್ವಯ ಆಗಲ್ಲ, ಆದರೆ ನೈಟ್ ಕರ್ಫ್ಯೂ ವೇಳೆ ಸಿನಿಮಾ ಬಂದ್ ಇರಲಿದೆ, ಮುಂದಿನ 10 ದಿನ ಪರಿಸ್ಥಿತಿ ನೋಡಿಕೊಂಡು ಸಿಎಂ ತೀರ್ಮಾನ ಮಾಡುವರು ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ಈಗಾಗಲೇ ಮೊದಲ ಡೋಸ್ ಶೇ.97ರಷ್ಟು ಆಗಿದೆ. ಬಾಕಿ ಉಳಿದ ಶೇ.3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ಹಾಕಲಾಗುತ್ತದೆ. ರಾಜ್ಯದಲ್ಲಿ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದೆ. ದೇಶದಲ್ಲಿ ಒಮಿಕ್ರಾನ್ 400ರ ಗಡಿ ದಾಟಿದೆ, ಒಮಿಕ್ರಾನ್ ಪ್ರಮಾಣ ಹೆಚ್ಚಳವಾಗೋ ಎಲ್ಲಾ ಸಾಧ್ಯತೆ ಇದೆ, ಹಾಗಾಗಿ, ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದು ತಿಳಿಸಿದರು.