ಬೆಂಗಳೂರು:ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮೂಲಕವೂ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್, ಗೃಹಸಚಿವರೇ, ರಾಜ್ಯದಲ್ಲಿ ಮಹಿಳೆಯರು ಸಂಜೆ ಏಳು ಗಂಟೆಯ ನಂತರ ಹೊರಗೆ ಬರಬಾರದು ಎಂಬ ನಿಯಮ ಮಾಡುವಿರಾ? ಬಿಜೆಪಿ ಹಾಗೂ ತಾಲಿಬಾನಿಗಳ ನೀತಿ ಒಂದೇ ಆಗಿರುವಾಗ ಈ ಬಗೆಯ ನಿಯಮ ಜಾರಿಗೊಳಿಸಿದರೂ ಅಚ್ಚರಿ ಏನಿಲ್ಲ. ಅತ್ಯಾಚಾರವೆಸಗಿದ್ದು, ಕಾನೂನು ಸುವ್ಯವಸ್ಥೆಯ ಲೋಪವಾಗಿದ್ದು ತಪ್ಪಾಗಿ ಕಾಣದೆ, ಸಂತ್ರಸ್ತೆ ಹೊರಬಂದಿದ್ದೇ ತಪ್ಪಾಗಿ ಕಂಡಿದ್ದು ವಿಪರ್ಯಾಸ ಎಂದಿದೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ದೂಷಿಸಿದರು. ಸಿದ್ದು ಸವದಿ ಹಲ್ಲೆ ಪ್ರಕರಣದಲ್ಲಿ ಸಂತ್ರಸ್ತೆಯನ್ನು ದೂಷಿಸಿದರು. ಮೈಸೂರಿನ ಅತ್ಯಾಚಾರ ಪ್ರಕರಣದಲ್ಲೂ ಸಂಜೆ ಹೋಗಿದ್ದು ತಪ್ಪು ಎಂದು ಸಂತ್ರಸ್ತೆಯನ್ನೇ ದೂಷಿಸುತ್ತಿದ್ದಾರೆ. ಇದು ಅಲ್ಲಿನ ತಾನಿಬಾನಿಗಳಂತೆಯೇ ಇಲ್ಲಿನ ತಾಲಿಬಾನಿ ಬಿಜೆಪಿಯ ಮಹಿಳಾ ವಿರೋಧಿ ನೀತಿ. ರೇಪ್ ಮಾಡುವುದೇನಿದ್ದರೂ ಬಿಜೆಪಿಯ ಸಂಸ್ಕೃತಿಯೇ ಹೊರತು ಕಾಂಗ್ರೆಸ್‌ನದ್ದಲ್ಲ. ಕಳೆದ ಬಾರಿಯ ಅಧಿಕಾರಾವಧಿಯಲ್ಲಿ ನಿಮ್ಮ ಶಾಸಕರೊಬ್ಬರು ಅತ್ಯಾಚಾರವೆಸಗಿದ್ದರು. ಈ ಬಾರಿ ನಿಮ್ಮ ಮಾಜಿ ಸಚಿವರೊಬ್ಬರು ಉದ್ಯೋಗ ಕೇಳಿದ ಯುವತಿ ಮೇಲೆ ಅತ್ಯಾಚಾರವೆಸಗಿದ್ದರು. ಅತ್ಯಾಚಾರಿಗಳೇ ತುಂಬಿರುವ ಬಿಜೆಪಿಯಿಂದ ಇನ್ನೆಂತಹ ಹೇಳಿಕೆ ನಿರೀಕ್ಷಿಸಲಾದೀತು. ಎಂದು ಲೇವಡಿ ಮಾಡಿದೆ.
ರಾತ್ರಿ 7.30ರ ಸಮಯದಲ್ಲಿ ಅವರು ಅಲ್ಲಿಗೆ ಹೋಗಲೇಬಾರದಿತ್ತು. ರಾಜ್ಯದ ರಕ್ಷಣೆ ಹೊತ್ತ ಗೃಹಸಚಿವರೇ, ಇಂತಹ ಅಯೋಗ್ಯತನದ ಹೇಳಿಕೆ ಕೊಡಲು ನಾಚಿಕೆ ಆಗುವುದಿಲ್ಲವೇ? ರಾಜ್ಯ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ 7.30ರ ಸಂಜೆಯೂ ಅಪಾಯಕಾರಿ ಎಂದು ಸ್ವತಃ ಅವರೇ ಒಪ್ಪಿದ್ದಾರೆ. ಇಂತಹ ಅಸಮರ್ಥ ಬಿಜೆಪಿಯಿಂದ ರಾಜ್ಯದ ಜನತೆಯ ರಕ್ಷಣೆ ಸಾಧ್ಯವೇ ಇಲ್ಲ. ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂಬ ಗೃಹಸಚಿವರ ಹೇಳಿಕೆ ಅವರ ಅಸಹಾಯಕತೆ, ಅದಕ್ಷತೆ, ಅಯೋಗ್ಯತನ ಹಾಗೂ ವೈಫಲ್ಯವನ್ನು ಒಪ್ಪಿಕೊಂಡಂತಿದೆ. ಮಂತ್ರಿ ಸ್ಥಾನ ಪಡೆಯಲು ಲಾಭಿ ನಡೆಸುವುದಷ್ಟೇ ಅಲ್ಲ ಸ್ವಾಮಿ, ಪಡೆದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಯೋಗ್ಯತೆಯೂ ಇರಬೇಕು. ಅನರ್ಹರು ಅಳಲು ಬಂದರೆ ಹೀಗೆಯೇ ನಡೆದುಕೊಳ್ಳುತ್ತಾರೆ ಎಂದಿದೆ.
ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಎಸಗಿದ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್ ಸೇರಿದಂತೆ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವಲ್ಲಿ ಪ್ರತಿಭಟನೆ ನಡೆಸಿದರು.