ಬೆಂಗಳೂರು:ಸಂಚಾರಿ ನಿಯಮ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಹಾಗೂ ವಾಹನ ಸವಾರರಲ್ಲಿ ಅರಿವು ಮೂಡಿಸಬೇಕಾದರೆ ನಿಯಮ ಉಲ್ಲಂಘಿಸಿದವರಿಂದ ದಂಡ ಕಟ್ಟಿಸಿಕೊಳ್ಳಲೇಬೇಕು. ದಂಡ ಹಾಕಿದಾಗ ಮಾತ್ರ ಜನರು ಎಚ್ಚೆತ್ತುಕೊಳ್ಳುತ್ತಾರೆ. ಹೀಗಾಗಿ ಸವಾರರು ನಿಯಮ ಉಲ್ಲಂಘಿಸಿದಂತೆ ಎಚ್ಚರವಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿವಿಮಾತು ಹೇಳಿದ್ದಾರೆ.
ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ನಗರದ ಮಕ್ಕಳ ಟ್ರಾಫಿಕ್ ಪಾರ್ಕ್‌ನಲ್ಲಿ ಮಕ್ಕಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಕ್ಕಳನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ನಡೆಸಿದ ಮೊದಲ ಸಭೆಯಲ್ಲಿ ಸ್ಥಳದಲ್ಲಿ ದಂಡ ವಸೂಲಿ ಮಾಡದ ಹಾಗೆ ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಇದರಂತೆ ಕೆಲದಿನಗಳ ಕಾರ್ಯಾಚರಣೆ ಮಾಡದಿರಲು ಪೊಲೀಸರು ನಿರ್ಧರಿಸಿದ್ದರು.
ಈ ವೇಳೆ ಹಿಂದಿಗಿಂತಲೂ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿತ್ತು. ದಂಡದ ಭಯವಿಲ್ಲದೇ ಹೋದರೆ ವಾಹನ ಸವಾರರು ನಿಯಮಗಳನ್ನು ಪಾಲಿಸಲು ಹೋಗುವುದಿಲ್ಲ. ಈ ದಿಸೆಯಲ್ಲಿ ಜಾಗೃತಿ ಜೊತೆಗೆ ಸವಾರರ ಜೀವ ಉಳಿಸುವ ನಿಟ್ಟಿನಲ್ಲಿ ಸ್ಥಳದಲ್ಲೇ ದಂಡ ವಸೂಲಿ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದರು.
ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಪೊಲೀಸರ ಕಾರ್ಯ ಶ್ಲಾಘನೀಯ:
ಬೆಂಗಳೂರಿನಲ್ಲಿ ಪ್ರತಿದಿನ 2,300ಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗಿ ರಸ್ತೆಗಿಳಿಯುತ್ತಿವೆ. ಜನಸಂಖ್ಯೆ ಹೆಚ್ಚಾದಂತೆ ವಾಹನಗಳು ಅಧಿಕವಾಗತೊಡಗಿವೆ. ಇದರಿಂದ ರಸ್ತೆಗಳ ಮೇಲೆ ಒತ್ತಡ ದ್ವಿಗುಣವಾಗುತ್ತಿವೆ.