ಕರ್ನಾಟಕ

karnataka

ETV Bharat / city

ಕುಮಾರಸ್ವಾಮಿ, ಸುಮಲತಾ ನಡುವಿನ ವಾಗ್ಯುದ್ಧ ಇಂದು ನಿನ್ನೆಯದಲ್ಲ, ಆ ಸೋಲಿನಿಂದಲೇ ಶುರು! - ಕುಮಾರಸ್ವಾಮಿ, ಸುಮಲತಾ ನಡುವಿನ ಟಾಕ್ ವಾರ್

ಕೆಆರ್​ಎಸ್‌ ಡ್ಯಾಂ ಬಾಗಿಲಿಗೆ ಅಡ್ಡಲಾಗಿ ಸುಮಲತಾ ಅವರನ್ನು ಕಟ್ಟಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.

kumaraswamy-and-sumalatha-talk-war
ಮಾಜಿ ಸಿಎಂ ಕುಮಾರಸ್ವಾಮಿ, ಸುಮಲತಾ ನಡುವಿನ ಟಾಕ್ವಾರ್​ಗೆ ಕಾರಣವೇನು?

By

Published : Jul 8, 2021, 6:17 PM IST

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ, ಹಿರಿಯ ನಟಿ ಸುಮಲತಾ ನಡುವಿನ 'ಟಾಕ್ ವಾರ್ ' ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 2019ರ ಲೋಕಸಭಾ ಚುನಾವಣೆ ಸೋಲಿನ ನಂತರ ಜಿದ್ದಿನ ರಾಜಕಾರಣಕ್ಕೆ ವಿರಾಮ ನೀಡಿದ್ದ ಅವರಿಬ್ಬರೂ ಇದೀಗ ಮತ್ತೆ ಜಿದ್ದಿನ ರಾಜಕಾರಣಕ್ಕೆ ಬಿದ್ದಿರುವುದು ಕುತೂಹಲ ಮೂಡಿಸಿದೆ.

ಇದಕ್ಕೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅವರ ನಡುವಿನ ವಾಕ್ಸಮರ ಈಗಿನದ್ದಲ್ಲ. 2019ರ ಲೋಕಸಭಾ ಚುನಾವಣೆಯಿಂದಲೂ ಅವರ ನಡುವಿನ ಗಲಾಟೆ ಮುಂದುವರೆದಿದೆ. ಇದರ ಮೂಲ 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ನ ಸೋಲು. ಇದರ ಜೊತೆಗೆ ಇದೀಗ ಕೆಆರ್​ಎಸ್ ಡ್ಯಾಂ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನಲಾದ ವಿಚಾರ ಸದ್ದು ಮಾಡುತ್ತಿದೆ. ಜೆಡಿಎಸ್ ಕೆಲ ಶಾಸಕರು ಹಾಗೂ ಮುಖಂಡರು ಗಣಿಗಾರಿಕೆ ನಡೆಸುತ್ತಿದ್ದಾರೆ.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಆರೋಪಗಳಿಗೆ ಗುರಿಯಾಗಿದ್ದ ಸುಮಲತಾ ಅವರ ಕಾರ್ಯವೈಖರಿಯನ್ನು ಜೆಡಿಎಸ್ ನಾಯಕರು ಟೀಕಿಸಿದ್ದರು. ಆಕ್ಸಿಜನ್ ಸಮಸ್ಯೆ ಹಾಗೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಸುಮಲತಾ ಗುರಿಯಾಗಿದ್ದರು. ಈ ಗಣಿಗಾರಿಕೆ ವಿಚಾರವನ್ನೇ ಮುಂದಿಟ್ಟುಕೊಂಡು ಜೆಡಿಎಸ್ ನಾಯಕರಿಗೆ ಟಾಂಗ್ ಕೊಡಲು ಸುಮಲತಾ ಅವರು ಹೊಸ ಪ್ಲಾನ್ ಮಾಡಿದರೇ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​​ನ ಕೆಲವು ನಾಯಕರ ಹೇಳಿಕೆಗಳನ್ನು ಬಂಡವಾಳ ಮಾಡಿಕೊಂಡು ಸುಮಲತಾ ಗೆಲುವು ಸಾಧಿಸಿದ್ದರು. ಇದೀಗ ಗಣಿ ಬಲೆಯಲ್ಲಿ ಜೆಡಿಎಸ್ ನಾಯಕರನ್ನು ಕಟ್ಟಿ ಹಾಕಲು ಸುಮಲತಾ ಹೊಸ ದಾಳ ಉರುಳಿಸಿದರೆ?. ಮಂಡ್ಯ ಜಿಲ್ಲೆಯಲ್ಲಿ ಕೆಆರ್​​ಎಸ್ ಡ್ಯಾಂ ಭಾವನಾತ್ಮಕ ವಿಷಯ. ಇದನ್ನೇ ಮುಂದಿಟ್ಟುಕೊಂಡು ಜೆಡಿಎಸ್ ನಾಯಕರನ್ನು ಬಿಂಬಿಸಲು ಹೊರಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕೆಆರ್​ಎಸ್ ಡ್ಯಾಮ್​ನ ಸುತ್ತಮುತ್ತ ಕೆಲವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಅಂಶವನ್ನು ದಾಳವಾಗಿಟ್ಟುಕೊಂಡ ಸುಮಲತಾ ಅವರು ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಮತ್ತೊಂದೆಡೆ ಜಿದ್ದಿಗೆ ಬಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕರಾದ ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ನೇರವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಹೆಚ್​ಡಿಕೆ ಹಾಗೂ ಸಂಸದೆ ಸುಮಲತಾ ನಡುವೆ ಮಾತಿನ ವಾಕ್ಸಮರ ತಾರಕಕ್ಕೇರಿದೆ. ಇಬ್ಬರ ನಡುವಿನ ಏಟು-ಎದಿರೇಟು ಮುಂಬರುವ ಚುನಾವಣೆಗಳಿಗೆ ಪ್ರಬಲ ಅಸ್ತ್ರವಾಗಲಿದೆ.

ಶಪಥ ಮಾಡಿದ ಹೆಚ್​​ಡಿಕೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರನ್ನು ಸೋಲಿಸಲು ಕುಮಾರಸ್ವಾಮಿ ಶಪಥ ಮಾಡಿದ್ದಾರೆ. ಚುನಾವಣೆಗೂ ನಾಲ್ಕು ತಿಂಗಳು ಮುನ್ನ ಆಡಿಯೋ ದಾಖಲೆ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಚುನಾವಣಾ ಸಮಯದಲ್ಲಿ ಆಡಿಯೋ ಬಿಡುಗಡೆ ಮಾಡಿದರೆ ಜನರಿಗೆ ಸತ್ಯ ಗೊತ್ತಾಗುತ್ತದೆ. ಅದು ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಸುಮಲತಾ ಅವರನ್ನು ಮಂಡ್ಯದಲ್ಲಿ ಹಣಿಯಲು ಕುಮಾರಸ್ವಾಮಿ ಆಡಿಯೋ ಬಾಂಬ್ ಬಳಕೆ ಲೆಕ್ಕಾಚಾರದಲ್ಲಿದ್ದಾರೆ. ಸದ್ಯಕ್ಕೆ ಆಡಿಯೋ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡದಿರಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆಡಿಯೋ ಬಿಡುಗಡೆ ಮಾಡುವ ಮೂಲಕ ಮಗನ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ.

ತಿರುಗೇಟಿಗೆ ಸುಮಲತಾ ಸಜ್ಜು?

ನಾನೇನು ಕಡಿಮೆ ಇಲ್ಲವೆಂಬಂತೆ ಸುಮಲತಾ ಅವರು ಸಹ ತಿರುಗೇಟು ಕೊಡಲು ಸಜ್ಜಾಗಿದ್ದಾರೆ. ಕೆಆರ್​ಎಸ್‌ ಡ್ಯಾಂ ಬಾಗಿಲಿಗೆ ಅಡ್ಡಲಾಗಿ ಸುಮಲತಾ ಅವರನ್ನು ಕಟ್ಟಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆ ವಿರುದ್ಧದ ಮಾನಹಾನಿ ಹೇಳಿಕೆಯನ್ನೇ ಜೀವಂತವಾಗಿಡಲು ಸುಮಲತಾ ಬಣ ನಿರ್ಧರಿಸಿದೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ಸ್ವಾಭಿಮಾನ ಹಾಗೂ ಮಹಿಳೆಯ ಘನತೆಯ ಸ್ವಾಭಿಮಾನ ಬಳಸಿಕೊಳ್ಳಲು ಸುಮಲತಾ ತಂಡ ಮುಂದಾಗಿದೆ.

ಟಾಂಗ್ ನೀಡಿರುವ ಸುಮಲತಾ

ಕೆಆರ್​ಎಸ್ ಡ್ಯಾಂ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ವಿಚಾರಕ್ಕೆ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಜಟಾಪಟಿ ಮುಂದುವರಿದಿದೆ. ಡ್ಯಾಂನ ರಕ್ಷಣೆ ಇವರೊಬ್ಬರದ್ದೇ ಹೊಣೆನಾ? ಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿ ಅವರಿಗೆ ಅವರು ಅವರದ್ದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ನಡುವೆ ಡ್ಯಾಂ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಚರ್ಚೆ ನಡೆಯುತ್ತಿರುವುದರ ಜೊತೆಗೆ ಖುದ್ದು ಸುಮಲತಾ ಅವರೇ ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಇದು ಜೆಡಿಎಸ್ ನಾಯಕರನ್ನು ಮತ್ತಷ್ಟು ಕೆರಳಿಸಿದೆ.

ಇದರ ಮಧ್ಯೆ ಸುಮಲತಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಟ್ಟಾರೆ, ಮುಂದಿನ ದಿನಗಳಲ್ಲಿ ಗಣಿಗಾರಿಕೆ ವಾಕ್ಸಮರ ಯಾವ ಮಟ್ಟಕ್ಕೆ ತಲುಪುತ್ತದೋ ಎಂಬುದು ಕುತೂಹಲ ಮೂಡಿಸಿದೆ.

ABOUT THE AUTHOR

...view details