ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಬಂಧನದಿಂದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಂತಾಗಿದೆ. ವಿಚಾರಣೆಯಿಂದ ಹೊರಬರುವ ಮಾಹಿತಿಗಳಿಂದ ಗಲಭೆಗೆ ಕಾರಣ ಯಾರು ಎಂಬುದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಂಪತ್ರಾಜ್ ಬಂಧನವೇ ಗಲಭೆ ಪ್ರಕರಣಕ್ಕೆ ಮಹತ್ವದ ತಿರುವು: ಬಸವರಾಜ್ ಬೊಮ್ಮಾಯಿ
ಒಂದು ತಿಂಗಳಿನಿಂದ ಸಿಸಿಬಿ ಅಧಿಕಾರಿಗಳ ಕೈಗೆ ಸಿಗದೆ ತಪ್ಪಿಸಿಕೊಂಡು ಅಲೆಯುತ್ತಿದ್ದ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ರಾಜ್ ಕೊರೊನಾ ನೆಪವೊಡ್ಡಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದರು. ನಿನ್ನೆ ರಾತ್ರಿ ಅವರನ್ನು ಬಂಧಿಸಲಾಗಿದೆ. ಇಂದು ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. ಅದಾದ ಬಳಿಕ ಹೆಚ್ಚಿನ ತನಿಖೆ ನಡೆಯಲಿದೆ ಎಂದರು.
ಇದನ್ನೂ ಓದಿ...ಸಿಸಿಬಿ ವಶದಲ್ಲಿ ಸಂಪತ್ ರಾಜ್: ತಲೆಮರೆಸಿಕೊಂಡು ಮಾಜಿ ಮೇಯರ್ ಇದ್ದಿದ್ದೆಲ್ಲಿ ಗೊತ್ತಾ?