ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ 1800 ಕ್ಕೂ ಹೆಚ್ಚು ಇರುವ ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಲು 15 ದಿನ ಕಾಲಾವಕಾಶ ನೀಡಿದ ಹೈಕೋರ್ಟ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ 1800 ಕ್ಕೂ ಹೆಚ್ಚು ಇರುವ ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದ ಸೌಂದರ್ಯ ಹಾಳು ಮಾಡುತ್ತಿರುವ ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ನಗರದಲ್ಲಿ ಇನ್ನೂ ಅನಧಿಕೃತ ಜಾಹೀರಾತುಗಳಿವೆ. ಅಲ್ಲದೆ, ವಿಧಾನಸೌಧದ ಮುಂದೆಯೇ ಜಾಹೀರಾತು ಫಲಕವನ್ನು ಅಳವಡಿಸಲಾಗಿತ್ತು ಎಂದು ಪೀಠಕ್ಕೆ ತಿಳಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ವಿಧಾನಸೌಧದ ಮುಂದೆ ಜಾಹೀರಾತು ಫಲಕ ಹಾಕಲು ಬಿಬಿಎಂಪಿ ಏನಾದರೂ ಅವಕಾಶ ಕಲ್ಪಿಸಿತ್ತಾ? ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಪರ ವಕೀಲ ಪಿ.ಬಿ.ಅಚ್ಚಪ್ಪ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 1,806 ಅನಧಿಕೃತ ಜಾಹೀರಾತು ಫಲಕಗಳು ಮಾತ್ರ ಬಾಕಿ ಉಳಿದಿವೆ ಎಂದು ಸಮಜಾಯಿಸಿ ನೀಡಿದರು. ಹಾಗೂ ಆದಷ್ಟು ಬೇಗ ಅಕ್ರಮ ಮತ್ತು ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಮಾಡುತ್ತೇವೆ, ಇದಕ್ಕಾಗಿ 15 ದಿನಗಳ ಕಾಲಾವಕಾಶ ಬೇಕು ಎಂದು ಪಾಲಿಕೆ ಪರ ವಕೀಲರು ಕೇಳಿಕೊಂಡದರು.