ಕರ್ನಾಟಕ

karnataka

ETV Bharat / city

ಭಾರತದ ಶ್ರೇಷ್ಠತೆ ಮರುಕಳಿಸಿದ 'ವೇದ ವಿಜ್ಞಾನ ಗುರುಕುಲಂ' : ಇಲ್ಲಿನ ಶಿಕ್ಷಣ ಪದ್ಧತಿಯ ವಿಶೇಷತೆಗಳೇನು ಗೊತ್ತಾ?

ಹಿಂದಿನ ಕಾಲದಲ್ಲಿ ಖುಷಿಗಳು ಕುಟೀರದಲ್ಲಿ ಸಂಸ್ಕೃತ, ವೇದಾಧ್ಯಯನ ಮಾಡುತ್ತಿದ್ದರು ಎಂಬ ವಿಷಯವನ್ನು ನಾವು ಕೇಳಿದ್ದೇವೆ. ಆದರೆ, ಈಗಲೂ ಸಹ ಭಾರತದ ಶ್ರೇಷ್ಠ ವೈದಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸಗಳು ನಡೆಯುತ್ತಿವೆ. ಅದಕ್ಕೊಂದು ನಿದರ್ಶನ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಜನಸೇವಾ ಟ್ರಸ್ಟ್‌ ಆರಂಭಿಸಿರುವ 'ವೇದ ವಿಜ್ಞಾನ ಗುರುಕುಲಂ'. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ..

By

Published : Dec 4, 2021, 2:18 PM IST

Updated : Dec 4, 2021, 3:55 PM IST

gurukula-education-system-in-bangalore
ವೇದ ವಿಜ್ಞಾನ ಗುರುಕುಲಂ

ಬೆಂಗಳೂರು :ಅಧ್ಯಾತ್ಮ ವಿಷಯದ ಗ್ರಂಥ, ಸಂತರ ಚರಿತ್ರೆ, ದೇವತೆಗಳ ಪೌರಾಣಿಕ ಕಥೆ, ಸಂತರು ಮಾಡಿದ ಕೆಲವು ವಿಷಯದಲ್ಲಿನ ಮಾರ್ಗದರ್ಶನ ಇವೆಲ್ಲ ಎಷ್ಟು ಓದಿದರೂ, ಅದರಲ್ಲಿ ಸಿಗುವ ಆನಂದ ಪ್ರತಿದಿನ ಹೆಚ್ಚುತ್ತಲೇ ಇರುತ್ತದೆ. ಇಂತಹ ಪ್ರಕಾರದ ಗ್ರಂಥ ಓದುವುದರಿಂದ ಚೈತನ್ಯ ಸಿಗುತ್ತದೆ ಹಾಗೂ ಇದರಿಂದ ಬುದ್ಧಿಯ ಶುದ್ದಿ ಅಗುವುದರಿಂದ ಅನಂದ ಸಿಗುತ್ತದೆ.

ಸದ್ಯ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಅತಿ ವಿರಳವಾಗಿದೆ. ಹಿಂದಿನ ಕಾಲದಲ್ಲಿ ಋಷಿಗಳು ಕುಟೀರದಲ್ಲಿ ಸಂಸ್ಕೃತ, ವೇದಾಧ್ಯಯನ ಮಾಡುತ್ತಿದ್ದರು ಎಂಬ ವಿಷಯವನ್ನು ನಾವು ಕೇಳಿದ್ದೇವೆ. ಆದರೆ, ಈಗಲೂ ಸಹ ಭಾರತದ ಶ್ರೇಷ್ಠ ವೈದಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸಗಳು ನಡೆಯುತ್ತಿವೆ.

ಭಾರತದ ಶ್ರೇಷ್ಠತೆ ಮರುಕಳಿಸಿದ 'ವೇದ ವಿಜ್ಞಾನ ಗುರುಕುಲಂ'

ಅದಕ್ಕೊಂದು ನಿದರ್ಶನ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಜನಸೇವಾ ಟ್ರಸ್ಟ್‌ ಆರಂಭಿಸಿರುವ 'ವೇದ ವಿಜ್ಞಾನ ಗುರುಕುಲಂ'. ಇಲ್ಲಿ ಗುರುಕುಲರೂಪದ ಧರ್ಮ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ವಿಶೇಷ.

ಭಾರತದ ಶ್ರೇಷ್ಠ ವೈದಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವ ಪ್ರಮುಖ ಹೆಜ್ಜೆಯಾಗಿ, ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ 'ವೇದ-ವಿಜ್ಞಾನ ಗುರುಕುಲಂ' ಅನ್ನು 1997ರಲ್ಲಿ ಸ್ಥಾಪಿಸಲಾಗಿದೆ.

ಜನಸೇವಾದ ಬೆಳ್ಳಿಹಬ್ಬದ ಪ್ರಕಲ್ಪವಾಗಿ ಆರಂಭವಾದ ವೇದವಿಜ್ಞಾನ ಗುರುಕುಲವು ತನ್ನ ಅರ್ಧಮಂಡಲೋತ್ಸವವನ್ನೂ ಆಚರಿಸುತ್ತಿರುವುದು ಮತ್ತೊಂದು ವಿಶೇಷ.

Vedic Science Gurukulam :ಗುರುಕುಲ ಮಾದರಿಯ ಮೌಲ್ಯಾಧಾರಿತ ಶಿಕ್ಷಣದೊಂದಿಗೆ, ಶಿಕ್ಷಣ ಭಾರತೀಯತೆ ಎಂಬ ಮೂಲ ಪರಿಕಲ್ಪನೆಯೊಂದಿಗೆ ವಿಶಿಷ್ಟವಾದ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ವೇದ ವಿಜ್ಞಾನ ಗುರುಕುಲದಲ್ಲಿ ಆಧುನಿಕ ವಿಜ್ಞಾನ, ವೇದಾಂತ, ವ್ಯಾಕರಣ, ಮೀಮಾಂಸೆ ಜೊತೆಗೆ ಯೋಗ ಮತ್ತು ಲಲಿತಕಲೆಗಳೊಂದಿಗೆ ವೇದಗಳು ಮತ್ತು ಸಂಸ್ಕೃತವನ್ನು ಕಲಿಯಲು ಈ ಗುರುಕುಲ ಸಹಕಾರಿಯಾಗಿದೆ.

ಗುರುಕುಲದ ಉದ್ದೇಶಗಳೇನು?:ವೇದಗಳು, ಶಾಸ್ತ್ರಗಳು (ವಿಜ್ಞಾನ) ಮತ್ತು ಯೋಗದ ಸಂಪ್ರದಾಯವನ್ನು ಅವುಗಳ ಮೂಲ ರೂಪದಲ್ಲಿ ಸಂರಕ್ಷಿಸುವುದು. ‌ಆಧುನಿಕ ಜಗತ್ತಿನಲ್ಲಿ ಗುರುಕುಲ ಸಂಪ್ರದಾಯವನ್ನು ಶಾಶ್ವತಗೊಳಿಸುವುದರ ಜೊತೆಗೆ ಯುವಕರಲ್ಲಿ ಸಾಮಾಜಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಒಳನೋಟವನ್ನು ಬೆಳೆಸುವುದು ಮತ್ತು ಈ ಆಧುನಿಕ ಯುಗದಲ್ಲಿ ಖುಷಿ ಪರಂಪರೆಯು ಇನ್ನೂ ಪ್ರಸ್ತುತವಾಗಿದೆ ಎಂದು ಸಾಬೀತುಪಡಿಸುವುದರ ಜೊತೆಗೆ ಶಾಸ್ತ್ರಗಳನ್ನು ಸರಿಯಾದ ಮಾರ್ಗದಲ್ಲಿ ಅಂದರೆ, ಸಂಸ್ಕೃತದ ಮೂಲಕ ಕಲಿಸಲು ಮತ್ತು ಸಂಸ್ಕೃತ ಸಂಭಾಷಣೆಯನ್ನು ಪ್ರಚಾರ ಮಾಡುವುದು ಈ ಗುರುಕುಲದ ಉದ್ದೇಶವಾಗಿದೆ. ಭಾರತದ ಶಾಸ್ತ್ರ ಪರಂಪರೆ, ಸಂಪ್ರದಾಯ) ಪ್ರಪಂಚದಾದ್ಯಂತ ಅತ್ಯಂತ ಗೌರವಯುತವಾಗಿ ನೋಡಲಾಗುತ್ತಿದೆ. ಗುರುಕುಲ ಪರಂಪರೆಯಿಂದ ಮಾತ್ರ ಇದನ್ನು ಸಾರಬಹುದು ಎಂಬುದು ವೇದ ವಿಜ್ಞಾನ ಗುರುಕುಲದ ವಿಧ್ಯಾರ್ಥಿಗಳ ಅಭಿಪ್ರಾಯ.

ಗುರುಕುಲಕ್ಕೆ ಸೇರಬೇಕಾದರೆ ಅರ್ಹತೆ ಏನು?: 16 ರಿಂದ 18 ವರ್ಷ ವಯಸ್ಸಿನ ಆಸಕ್ತ ಯುವಕರು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಸಂಸ್ಕೃತವನ್ನು ಒಂದು ವಿಷಯವಾಗಿ ಉತ್ತೀರ್ಣರಾಗಿಬೇಕು.

ಅಭ್ಯರ್ಥಿಯು ಗುರುಕುಲ ಸಂಪ್ರದಾಯದ ಪ್ರಕಾರ 7 ವರ್ಷಗಳವರೆಗೆ (ಗುರುಕುಲದಲ್ಲಿ 5 ವರ್ಷ ಮತ್ತು ಶೋಧ ಸಂಸ್ಥಾನದಲ್ಲಿ 2 ವರ್ಷ) ಅಧ್ಯಯನ ಮಾಡಲು ಸಿದ್ಧರಾಗಿರಬೇಕು ಮತ್ತು ಸರಿಯಾದ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಪ್ರವೃತ್ತಿಯನ್ನು ಹೊಂದಿರಬೇಕು. ಸಂಸ್ಕೃತದಲ್ಲೇ ಅಧ್ಯಯನ ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಮಾತನಾಡುವುದು ಸಹ ಸಂಸ್ಕೃತದಲ್ಲೇ.

ಈಗಾಗಲೇ 55 ವಿದ್ಯಾರ್ಥಿಗಳು ಗುರುಕುಲ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಸಂಸ್ಕೃತ ಮತ್ತು ಯೋಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರಲ್ಲಿ ಮೂವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ ಮತ್ತು ಇನ್ನೂ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಸಮಾಜಕ್ಕೆ ಸೇವೆ ಸಲ್ಲಿಸಲು ತಮ್ಮದೇ ಆದ ವೈದಿಕ, ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ.

ಪ್ರಸ್ತುತ ವೇದ ವಿಜ್ಞಾನ ಗುರುಕುಲದಲ್ಲಿ ಕರ್ನಾಟಕ, ದೆಹಲಿ, ಗುಜರಾತ್, ರಾಜಸ್ಥಾನ, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ 12 ರಾಜ್ಯಗಳಿಂದ ಬಂದಿರುವ ಸುಮಾರು 85 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಗುರುಕುಲದಲ್ಲೇ ಉಚಿತವಾಗಿ ವಸತಿ, ಊಟ, ಔಷಧ, ಆಧ್ಯಯನ ನೀಡಲಾಗುತ್ತದೆ.

ವಿಜ್ಞಾನ ಗುರುಕುಲ 1997 ರಲ್ಲಿ ಆರಂಭವಾಯಿತು. ಮೂರು ವರ್ಷ ಪ್ರಾಥಮಿಕ ಶಿಕ್ಷಣ ನಂತರ ಗ್ರಂಥ ಅಧ್ಯಯನ, ಎರಡು ವರ್ಷ ಶೋಧ ಅಧ್ಯಯನ ಇರುತ್ತದೆ. ನಾನು ಏಳು ವರ್ಷಗಳ ಕಾಲ ಅಧ್ಯಯನ ನಡೆಸಿ ಇಲ್ಲೇ ಕಳೆದ ಒಂದು ವರ್ಷದಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ' ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆಯ ಬೋಜರಾಜ.

ದೇಶದ ಬೇರೆ ಬೇರೆ ಪ್ರಾಂತ್ಯದಿಂದ ವಿದ್ಯಾರ್ಥಿಗಳು ಗುರುಕುಲದಲ್ಲಿ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಆಳವಾಗಿ ಅಧ್ಯಯನ ಮಾಡಿ ನಮ್ಮ ದೇಶದ ಸಂಸ್ಕೃತಿ, ಗ್ರಂಥಗಳನ್ನು ಸಮಾಜಕ್ಕೆ ತಿಳಿಸಿಕೊಡುವ ಕೆಲಸವಾಗುತ್ತಿದೆ. ವೇದ ವಿಜ್ಞಾನ ಗುರುಕುಲಕ್ಕೆ ಇನ್ನಷ್ಟು ಆಯಾಮ ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ ' ಎಂದು ಜನಸೇವಾ ವಿಶ್ವಸ್ತಮಂಡಳಿ ನಿರ್ವಾಹಕ ಎನ್. ತಿಪ್ಪೇಸ್ವಾಮಿ ಹೇಳಿದ್ರು.

Last Updated : Dec 4, 2021, 3:55 PM IST

ABOUT THE AUTHOR

...view details