ಕರ್ನಾಟಕ

karnataka

ETV Bharat / city

ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೂ ಪರಿಹಾರ: ಹೈಕೋರ್ಟ್​ಗೆ ಮಾಹಿತಿ ನೀಡಿದ ಸರ್ಕಾರ

ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೂ ಪರಿಹಾರ ಕಲ್ಪಿಸುವ ಪ್ರಸ್ತಾವನೆಗೆ ಸಿಎಂ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಹೈಕೋರ್ಟ್
High Court

By

Published : Jul 2, 2021, 7:37 PM IST

ಬೆಂಗಳೂರು: ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಗಳಿಗೂ ಪರಿಹಾರ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಈ ಕುರಿತು ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2016 ರಿಂದ ಬೆಳೆ ನಷ್ಟ ವಿಮೆ ಪರಿಹಾರ ವಿತರಿಸಿಲ್ಲ ಎಂದು ಆಕ್ಷೇಪಿಸಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೂ ಪರಿಹಾರ ಕಲ್ಪಿಸುವ ಪ್ರಸ್ತಾವನೆಗೆ ಸಿಎಂ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಒಂದು ವಾರದಲ್ಲಿ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೋ ಪೀಠಕ್ಕೆ ಮಾಹಿತಿ ನೀಡಿ, ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ತೀರಿಸಲಾಗದೆ ಯಾದಗಿರಿ ಜಿಲ್ಲೆಯ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೆಮೊ ಸಲ್ಲಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಒಂದು ವಾರದಲ್ಲಿ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಮೊದಲು ಆದೇಶ ಹೊರಬರಲಿ, ಅದರಲ್ಲಿನ ಷರತ್ತುಗಳನ್ನು ಪರಿಶೀಲಿಸಿ ಮುಂದಿನ ನಿರ್ದೇಶನ ನೀಡಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಏಪ್ರಿಲ್ 20 ರಂದು ಪ್ರಮಾಣಪತ್ರ ಸಲ್ಲಿಸಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಹಾಗೂ ಸಹಕಾರಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಈ ಪರಿಹಾರ ನೀಡಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಪೀಠ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುವುದು ಸಂವಿಧಾನದ ವಿಧಿ 14ರ ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹೀಗಾಗಿ ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೂ ಪರಿಹಾರ ನೀಡಲು ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ABOUT THE AUTHOR

...view details