ಬೆಂಗಳೂರು: ಅತಿವೃಷ್ಟಿ ಪರಿಹಾರ ನೀಡಿಕೆ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರತಿ ವರ್ಷ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡುತ್ತಲೆ ಇದೆ. ರಾಜ್ಯದಲ್ಲಿ ಕಳೆದ ಮೂರು ವರ್ಷದಿಂದ ಪ್ರವಾಹ ಸಂಭವಿಸುತ್ತಿದೆ. ಆದರೆ, ಪರಿಹಾರ ಕೇಳಿದಾಗ ಕೇಂದ್ರ ಕಾಟಾಚಾರಕ್ಕೆ ಪುಡಿಗಾಸು ಬಿಡುಗಡೆ ಮಾಡಿದ್ದು ಬಿಟ್ಟರೆ ಇನ್ನೇನು ಮಾಡಲಿಲ್ಲ ಎಂದಿದ್ದಾರೆ.
ಪ್ರಧಾನಿ ಅವರು ಈ ಬಾರಿಯಾದರೂ ಅತಿವೃಷ್ಟಿ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಮೋದಿ ಹೆಸರು ಹೇಳಿಕೊಂಡು ಸಂಸದರಾದ 25 ಬಿಜೆಪಿ ಸದಸ್ಯರು ವಸ್ತುಸ್ಥಿತಿಯನ್ನು ಪ್ರಧಾನಿ ಗಮನಕ್ಕೆ ತರಲಿ. ಪರಿಹಾರ ವಿಚಾರದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಇನ್ನಾದರೂ ಸರಿಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಪ್ರವಾಹದಿಂದಾಗಿ ಅಂದಾಜು ₹50 ಸಾವಿರ ಕೋಟಿ ನಷ್ಟವುಂಟಾಗಿತ್ತು. ರಾಜ್ಯ ಸರ್ಕಾರ ₹35 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇಂದ್ರ ಪರಿಹಾರ ಕೊಟ್ಟಿದ್ದು ಕೇವಲ ₹1800 ಕೋಟಿ ಮಾತ್ರ ಎಂದಿದ್ದಾರೆ.
ರಾಜ್ಯಕ್ಕಾದ ಅನ್ಯಾಯವನ್ನು ಬಿಜೆಪಿ ಸಂಸದರು ಪ್ರಧಾನಿ ಅವರನ್ನು ಪ್ರಶ್ನಿಸುವ ಎದೆಗಾರಿಕೆ ಪ್ರದರ್ಶಿಸಲಿ. ಪ್ರಧಾನಿ ಜೊತೆ ಸಂವಾದ ನಡೆಸುತ್ತಿರುವ ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಅವರೇ ನೀವಾದರೂ ರಾಜ್ಯದ ಜನರ ಸಂಕಷ್ಟವನ್ನು ಪ್ರಧಾನಿ ಅವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದ್ದಾರೆ.