ಬೆಂಗಳೂರು:ಕರ್ನಾಟಕಕ್ಕೆ ನಿತ್ಯ 1200 ಟನ್ ಆಮ್ಲಜನಕ ಪೂರೈಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. 'ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆ ಹೆಚ್ಚಿಸಿದರೆ ಆರೋಗ್ಯ ವ್ಯವಸ್ಥೆ ಕುಸಿಯಲಿದೆ' ಎಂದು ವಾದಿಸಿದೆ. ಕರ್ನಾಟಕದಿಂದ ಎಲ್ಲವನ್ನೂ ಪಡೆದ ಕೇಂದ್ರ, ರಾಜ್ಯಕ್ಕೆ ಇನ್ನೆಷ್ಟು ವಂಚಿಸಬೇಕೆಂದಿದೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ ನಿತ್ಯ 1700 ಟನ್ ಆಮ್ಲಜನಕದ ಅಗತ್ಯವಿದೆ. ಆದರೂ, 1200 ಟನ್ ಆಮ್ಲಜನಕ ಇದ್ದರೆ ಪರಿಸ್ಥಿತಿ ಹೇಗೋ ನಿಭಾಯಿಸಬಹುದು. ಕರ್ನಾಟಕದಲ್ಲಿ ಹೆಚ್ಚು ಕಡಿಮೆ 1200 ಟನ್‌ಗೂ ಅಧಿಕ ಪ್ರಮಾಣದ ಆಮ್ಲಜನಕವೂ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮಿಂದ ಆಮ್ಲಜನಕ ಕಿತ್ತುಕೊಳ್ಳುತ್ತಿರುವ ಕೇಂದ್ರ ಪೂರೈಸುತ್ತಿರುವುದು 865-965 ಟನ್ ಮಾತ್ರ. ಅನುದಾನದಲ್ಲಿ ತಾರತಮ್ಯ, ಜಿಎಸ್‌ಟಿ ಬಾಕಿಯಲ್ಲಿ ತಾರತಮ್ಯ, ನೆರೆ-ಬರ ಪರಿಹಾರದಲ್ಲಿ ಮಾಡಲಾದ ತಾರತಮ್ಯವನ್ನು ಕರ್ನಾಟಕ, ಕನ್ನಡಿಗರು ಹೇಗೋ ಸಹಿಸಿದ್ದಾರೆ. ಆದರೆ, ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಈ ಮಾರಕ ತಾರತಮ್ಯವನ್ನು ಸಹಿಸುವುದಾದರೂ ಹೇಗೆ? ಇದು ಕನ್ನಡಿಗರ ಜೀವ, ಜೀವನದ ಪ್ರಶ್ನೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯುತ್ತಿಲ್ಲ ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.