ಬೆಂಗಳೂರು: ಜ್ಞಾನಭಾರತಿ ವಾಯು ವಿಹಾರಿಗಳ ಸಂಘ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಸದಸ್ಯತ್ವ ನೋಂದಣಿ ಶುಲ್ಕ ಹಾಗೂ ದೇಣಿಗೆ ಪಡೆಯುತ್ತಿರುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಘವು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಾಗರಭಾವಿ ಶಾಖೆ, ಜ್ಞಾನಭಾರತಿ ಆವರಣದಲ್ಲಿ ಉಳಿತಾಯ ಖಾತೆಯನ್ನು ಸಹ ತೆರೆದಿರುವುದಾಗಿ ತಿಳಿದು ಬಂದಿದೆ.
ಹೀಗಾಗಿ, ಪ್ರತಿನಿತ್ಯ ವಾಯುವಿಹಾರಕ್ಕೆ ಜ್ಞಾನಭಾರತಿ ಆವರಣಕ್ಕೆ ಭೇಟಿ ನೀಡುವ ವಾಯುವಿಹಾರಿಗಳು ಹಾಗೂ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ, ಬೆಂಗಳೂರು ವಿಶ್ವವಿದ್ಯಾಲಯವು ಮೇಲ್ಕಂಡ ಸಂಘಕ್ಕೆ ಯಾವುದೇ ಮಾನ್ಯತೆಯನ್ನಾಗಲೀ ಅಥವಾ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿರುವುದಿಲ್ಲ. ಜ್ಞಾನಭಾರತಿ ಆವರಣದಲ್ಲಿರುವ ಬಯೋಪಾರ್ಕ್, ಮರ-ಗಿಡಗಳನ್ನು ಹಾಗೂ ಹಸಿರು ವಲಯವನ್ನು ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುತ್ತದೆ. ಆದರೆ, ಕೆಲವು ಅನಧಿಕೃತ ವ್ಯಕ್ತಿಗಳು ಜ್ಞಾನಭಾರತಿ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದಾರೆ.
ಜ್ಞಾನ ಭಾರತಿ ವಾಯು ವಿಹಾರಿಗಳ ಸಂಘದ ಹೆಸರಲ್ಲಿ ದೇಣಿಗೆ ಸಂಗ್ರಹ: ಎಚ್ಚರಿಕೆ ನೀಡಿದ ವಿವಿ
ಅನಧಿಕೃತ ವ್ಯಕ್ತಿಗಳು ಜ್ಞಾನಭಾರತಿ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ದೇಣಿಗೆ ಕೊಡಬಾರದೆಂದು ಬೆಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ವಿವಿ
ಆದಕಾರಣ, ಸಾರ್ವಜನಿಕರು ಮತ್ತು ವಾಯುವಿಹಾರಿಗಳು ಮೇಲ್ಕಂಡ ಸಂಘದ ಸದಸ್ಯರಾಗುವುದಾಗಲಿ ಅಥವಾ ದೇಣಿಗೆ ನೀಡುವುದಾಗಲಿ ಮಾಡಬಾರದೆಂದು ಮತ್ತು ಇಂತಹ ಸಂಘ ಅಥವಾ ವ್ಯಕ್ತಿಗಳನ್ನು ಉತ್ತೇಜಿಸಬಾರದೆಂದು ಈ ಮೂಲಕ ಸಾರ್ವಜನಿಕರು ಮತ್ತು ಜ್ಞಾನಭಾರತಿ ವಾಯುವಿಹಾರಿಗಳ ಗಮನಕ್ಕೆ ತರಲಾಗಿದೆ ಎಂದು ವಿವಿ ಪ್ರಕಟಣೆ ಹೊರಡಿಸಿದೆ.