ದೇವನಹಳ್ಳಿ: ಹಲಾಲ್ ವಿವಾದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುತ್ತಿರುವ ಹಿಂದೂ ಸಂಘಟನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಡಸ್ತನ ಇದ್ದರೆ ಮೊದಲು ನಿಯಂತ್ರಿಸಲಿ ಎಂಬ ವಿವಾದಾತ್ಮಕ ಹೇಳಿಕೆಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಕುಮಾರಣ್ಣ ಬಹಳ ಹಿರಿಯರಿದ್ದಾರೆ. ಈ ಬಗ್ಗೆ ಉತ್ತರ ನೀಡುವುದಿಲ್ಲ ಎಂದು ಹೇಳಿದರು.
ಹಲಾಲ್ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಗಂಡಸ್ತನ ಇಲ್ಲ, ಕಾಂಗ್ರೆಸ್ ಗೆ ತಾಖತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ, 'ಕುಮಾರಣ್ಣ ಬಹಳ ಹಿರಿಯರಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಅವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೊ, ಬೇರೆಯವರು ಮಾತನಾಡುತ್ತಾರೋ ಆ ಬಗ್ಗೆ ಉತ್ತರ ನೀಡುವುದಿಲ್ಲ. ಸದ್ಯ ನಾವು ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದು, ಇಂದು ಕಡೆಯ ದಿನವಾಗಿದೆ. ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಇಂತಹ ವಿಚಾರಗಳಿಗೆ ಜನ ಉತ್ತರ ನೀಡುತ್ತಾರೆ' ಎಂದರು.
ನಾಳೆ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ 115 ನೇ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಆಗಮಿಸಿರುವ ಪಕ್ಷದ ನಾಯಕ ರಾಹುಲ್ ಗಾಂಧಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲು ಆಗಮಿಸಿದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದರು.