ಕರ್ನಾಟಕ

karnataka

ETV Bharat / city

ನಗರದಲ್ಲಿ ಡೆಂಘಿ ಪ್ರಕರಣಗಳ ಉಲ್ಬಣ; ರೋಗ ಹತೋಟಿಗೆ ಬಿಬಿಎಂಪಿ ಕ್ರಮ

ಬೇಸಿಗೆಯ ಆರಂಭದಲ್ಲಿಯೇ 1793 ಡೆಂಘಿ, ಮಲೇರಿಯಾ ರೀತಿಯ ಸಾಂಕ್ರಾಮಿಕ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದು ಅಗತ್ಯ ಕ್ರಮಕ್ಕೆ ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

By

Published : Apr 12, 2022, 8:09 PM IST

bbmp
ಬಿಬಿಎಂಪಿ

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ನಗರದಲ್ಲಿ ಡೆಂಘಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಉಲ್ಬಣಗೊಂಡಿವೆ. ನಗರದ ಕೆಲವು ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಗರದಾದ್ಯಂತ 1793 ಡೆಂಘಿ ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಒಟ್ಟಾರೆ 1800 ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವರ್ಷದಲ್ಲಿ ಬೇಸಿಗೆಯ ಆರಂಭದಲ್ಲಿಯೇ 1793 ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನದಲ್ಲಿ ಡೆಂಘಿ ಮತ್ತು ಮಲೇರಿಯಾದಂತೆ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ನಿಂತ ನೀರಿನಲ್ಲಿ ಲಾರ್ವ ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳ ಸಮೀಪ ಸೊಳ್ಳೆಗಳು ಹೆಚ್ಚಾಗುತ್ತಿದ್ದು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಸೊಳ್ಳೆ ಹೆಚ್ಚಿರುವ ಪ್ರದೇಶಗಳು ಹಾಗೂ ಲಾರ್ವ ಉತ್ಪತ್ತಿಯಾಗುವ ನಿಂತ ನೀರಿನ ಮೇಲೆ ಲಾರ್ವಿಸೈಡ್ ಹಾಗೂ ಫಾಗಿಂಗ್ ಮಾಡುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ನಗರದ ಪೂರ್ವ ವಲಯದಲ್ಲಿ ಅತಿ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾಗಿವೆ.

ನಿಯಂತ್ರಣ ಹೇಗೆ?: ಸಾಂಕ್ರಾಮಿಕ ರೋಗದಿಂದ ಬಚಾವಾಗಬೇಕಾದರೆ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರವಹಿಸಬೇಕು. ಮನೆಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದರೆ, ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ರಕ್ಷಣೆ ಮಾಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗ ಮಾಡುವುದು ಸೂಕ್ತ. ಮಕ್ಕಳಿಗೆ ಸೊಳ್ಳೆ ಕಡಿತವಾಗಿದ್ದರೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತ್ರಿಲೋಕ್ ಚಂದ್ರ ಮನವಿ ಮಾಡಿಕೊಂಡಿದ್ದಾರೆ.

ಪಾಲಿಕೆಯಿಂದ ಕ್ರಮಗಳೇನು?: ನಗರದಲ್ಲಿ ಡೆಂಘಿ, ಮಲೇರಿಯಾದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಬಿಬಿಎಂಪಿ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಡೋರ್ ಟು ಡೋರ್ ಸರ್ವೇ ಕಾರ್ಯ ಆರಂಭಿಸಲಾಗಿದೆ. ನಿಂತ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸೈಬರ್​ ಭದ್ರತೆ : ಸರ್ಕಾರಕ್ಕೆ ನೆರವು ನೀಡಲು ಆಸಕ್ತಿ ತೋರಿದ ಐಬಿಎಂ

For All Latest Updates

ABOUT THE AUTHOR

...view details