ಬೆಂಗಳೂರು :ರಾಯಚೂರು ವಿಶ್ವ ವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕರೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದಲ್ಲಿ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಮನ ಹೆಸರನ್ನು ಬಳಕೆ ಮಾಡಿಕೊಂಡು ಈ ರೀತಿಯ ಕೆಟ್ಟ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ.
ರಾಮನೆಂದರೆ ಹಿಂದೂಗಳಿಗೆ ಧ್ಯಾನ, ಭಕ್ತಿ, ಶ್ರದ್ಧೆ. ಸಮಸ್ತ ಹಿಂದುಗಳ ಭಾವನೆ ಗೌರವಿಸಿ ಬಿಜೆಪಿಯು ಇನ್ನು ಮುಂದೆ ರಾಮನ ಹೆಸರು ಹೇಳುವುದನ್ನ ನಿಲ್ಲಿಸಬೇಕು. ರಾಜಕೀಯ, ಕೊಲೆ, ಸುಲಿಗೆ, ಹಿಂಸೆ, ವಂಚನೆ ಮುಂತಾದ ಅಧರ್ಮಗಳು ತನ್ನ ಹೆಸರಲ್ಲಿ ಮಾಡುವುದನ್ನ ರಾಮ ಸಹಿಸುವುದಿಲ್ಲ, ರಾಮನ ನಿಜ ಭಕ್ತರೂ ಸಹಿಸುವುದಿಲ್ಲ. ಬಿಜೆಪಿಗರು "ಜೈ ಶ್ರೀರಾಮ್" ಎಂದರೆ ಸ್ವತಃ ರಾಮನೇ ಅಸಹ್ಯಪಟ್ಟುಕೊಳ್ಳುತ್ತಾನೆ ಎಂದು ವಾಗ್ದಾಳಿ ನಡೆಸಿದೆ.
ಓದಿ-ಕುಲಪತಿ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕನಿಗೆ ವಂಚನೆ ಆರೋಪ: ಮಂಗಳೂರಲ್ಲಿ ರಾಮ ಸೇನೆ ಸಂಸ್ಥಾಪಕ ಅರೆಸ್ಟ್
ರಾಮನ ಹೆಸರಲ್ಲಿ ಬಿಜೆಪಿ ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ. ಪ್ರಸಾದ್ ಅತ್ತಾವರ ಎನ್ನುವ ಬಿಜೆಪಿ ಮುಖಂಡನ ವಂಚನೆ ಜಾಲ ಬಯಲಾಗಿದೆ. ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ₹17 ಲಕ್ಷ ವಂಚಿಸಿದ್ದಾನೆ. ರಾಮ ಬಿಜೆಪಿಯನ್ನು ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮುಖಾಂತರ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಈ ಟ್ವೀಟ್ಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯೆ ನೀಡಿ, ರಾಮನೇ ಇಲ್ಲ ಎಂದವರು ಈಗ ರಾಮನ ಜಪ ಮಾಡುತ್ತಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದರೆ,ಟೋಪಿ ಹಾಕಿಕೊಂಡು ಓಲೈಕೆ ರಾಜಕಾರಣ ಮಾಡುತ್ತಾ, ಶ್ರೀರಾಮನ ಆಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ ಇಂದು ರಾಮನ ಧ್ಯಾನದಲ್ಲಿ ತೊಡಗಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಹೀಗೆ ಪರ- ವಿರೋಧದ ನೂರಾರು ಟ್ವೀಟ್ಗಳನ್ನು ಈ ಸಂಬಂಧ ಮಾಡಲಾಗಿದೆ.