ಬೆಂಗಳೂರು:ಗಾಂಧಿನಗರದ ಗೋಲ್ಡನ್ ರೆಸಿಡೆನ್ಸಿಯಲ್ಲಿ ಟ್ರಸ್ಟ್-ವೆಲ್ ಆಸ್ಪತ್ರೆ ಮತ್ತು ಜಿಟೋ ಆಶ್ರಯದಲ್ಲಿ ಕಾಂಗ್ರೆಸ್ ತೆರೆದಿರುವ 50 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋಮವಾರ ಉದ್ಘಾಟಿಸಿದರು.
ಸರ್ಕಾರದಿಂದ ಸೂಕ್ತ ಕೋವಿಡ್ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸಲಾಗುತ್ತಿದೆ. ಪ್ರತಿಪಕ್ಷವಾಗಿ ಆರೋಗ್ಯ ಸೇವೆ ಒದಗಿಸುವುದು ಕಾಂಗ್ರೆಸ್ ಜವಾಬ್ದಾರಿಯಾಗಿದೆ. ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಎಲ್ಲಾ ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ಆರೋಗ್ಯ ಸೇವೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಈ ಒಂದು ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ. ಇದನ್ನು ಪಕ್ಷದ ಹಿಂದಿನ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿಯೇ ಸ್ಥಾಪಿಸಲಾಗಿದೆ. ಬೆಂಗಳೂರು ಕೇಂದ್ರಭಾಗವಾಗಿರುವ ಗಾಂಧಿನಗರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆ ಸುಸಜ್ಜಿತ ಸೇವೆ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಇಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದೆ.