ಕರ್ನಾಟಕ

karnataka

ಬೆಂಗಳೂರು ಹೊರವಲಯದ ಜನರಿಗೆ ಕೋವಿಡ್ ಭೀತಿ: ಕೋರ್ ವಲಯಗಳ ಜನ ಸದ್ಯಕ್ಕೆ ಪಾರು

By

Published : Nov 6, 2020, 2:22 PM IST

ನಾಲ್ಕು ತಿಂಗಳ ಕೋವಿಡ್ ಅಂಕಿಅಂಶ ಹೋಲಿಕೆ ಮಾಡಿ ನೋಡಿದಾಗ ನಗರದ ಆ್ಯಕ್ಟೀವ್ ಕೇಸ್ ಸಂಖ್ಯೆ ಕಡಿಮೆ ಆಗಿದೆ. ಪಾಸಿಟಿವ್ ಹಾಗೂ ಮರಣ ಪ್ರಮಾಣ ಕಡಿಮೆ ಇದೆ. ನಿನ್ನೆ 53 ಸಾವಿರ ಟೆಸ್ಟ್ ಮಾಡಲಾಗಿದ್ದು, 1600 ಮಾತ್ರ ಪಾಸಿಟಿವ್ ಬಂದಿವೆ..

commissioner-and-marshals-meeting-at-townhall
ಬೆಂಗಳೂರು ಹೊರವಲಯದ ಜನರಿಗೆ ಕೋವಿಡ್ ಭೀತಿ: ಕೋರ್ ವಲಯಗಳ ಜನ ಸದ್ಯಕ್ಕೆ ಪಾರು

ಬೆಂಗಳೂರು: ಮಾಸ್ಕ್​, ಸಾಮಾಜಿಕ ಅಂತರ ಕಾಪಾಡುವ ವಿಚಾರವಾಗಿ ಜನರು ಹಾಗೂ ಮಾರ್ಷಲ್ಸ್​ಗಳ ನಡುವೆ ಪದೇಪದೆ ಜಗಳವಾಗುತ್ತಿದೆ. ಮಾರ್ಷಲ್ಸ್​ಗಳಿರುವ ಗೊಂದಲ ಪರಿಹರಿಸಲು ಹಾಗೂ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯ ಸಾಧಿಸಲು ಟೌನ್​ಹಾಲ್​ನಲ್ಲಿ ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ನಡೆಸಿದ ಕೋವಿಡ್ ಸೆರೋಲಾಜಿಕಲ್ ಸಮೀಕ್ಷೆ ಪ್ರಕಾರ ಕೋರ್ ವಲಯಗಳಾದ ದಕ್ಷಿಣ, ಪಶ್ಚಿಮ ವಲಯ ಹಾಗೂ ಪೂರ್ವ ವಲಯಗಳ ಜನರಲ್ಲಿ ಆ್ಯಂಟಿ ಬಾಡಿ ವೃದ್ಧಿಯಾಗಿದ್ದು,ಹೊರವಲಯಗಳಲ್ಲಿ ಕೋವಿಡ್ ಹೆಚ್ಚಾಗಿ ಹರಡುವ ಭೀತಿ ಎದುರಾಗಿದೆ. ಕೋರ್ ವಲಯಗಳ ಜನರ ಸ್ಯಾಂಪಲ್ ತೆಗೆದುಕೊಂಡು ಟೆಸ್ಟ್​ ಮಾಡಲಾಗಿದೆ.

ಈ ವೇಳೆ ದಕ್ಷಿಣ ವಲಯದ ಶೇ.30, ಪೂರ್ವ ವಲಯದ ಶೇ.25% ಹಾಗೂ ಪಶ್ಚಿಮ ವಲಯದ 35% ಜನರಲ್ಲಿ ಕೋವಿಡ್ ರೋಗನಿರೋಧಕ ಶಕ್ತಿ ವೃದ್ಧಿಯಾಗಿದೆ. ಆದರೆ, ಹೊರವಲಯದಲ್ಲಿ ಆಗಿಲ್ಲ. ಹಾಗಾಗಿ, ಹೊರವಲಯದ ವಾರ್ಡ್​ಗಳಲ್ಲಿ ಹೆಚ್ಚೆಚ್ಚು ಟೆಸ್ಟ್ ಮಾಡ್ತೇವೆ. ಅಗತ್ಯಬಿದ್ದರೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದರು.

ನಾಲ್ಕು ತಿಂಗಳ ಕೋವಿಡ್ ಅಂಕಿಅಂಶ ಹೋಲಿಕೆ ಮಾಡಿ ನೋಡಿದಾಗ ನಗರದ ಆ್ಯಕ್ಟೀವ್ ಕೇಸ್ ಸಂಖ್ಯೆ ಕಡಿಮೆ ಆಗಿದೆ. ಪಾಸಿಟಿವ್ ಹಾಗೂ ಮರಣ ಪ್ರಮಾಣ ಕಡಿಮೆ ಇದೆ. ನಿನ್ನೆ 53 ಸಾವಿರ ಟೆಸ್ಟ್ ಮಾಡಲಾಗಿದ್ದು, 1600 ಮಾತ್ರ ಪಾಸಿಟಿವ್ ಬಂದಿವೆ. ಮರಣ ಪ್ರಮಾಣ ಇನ್ನೂ ಕಡಿಮೆ ಮಾಡಲು ಆಸ್ಪತ್ರೆಗಳ ಜೊತೆ ಮಾತುಕತೆ ನಡೆಸಿ, ಬೆಡ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.

ಇನ್ನು, ಮಾರ್ಷಲ್​ಗಳಿಗೆ ಇರುವ ಗೊಂದಲಗಳನ್ನು ಬಗೆಹರಿಸಲು ಮಾರ್ಷಲ್ಸ್ ಹಾಗೂ ಜನರ ನಡುವೆ ಸಂಘರ್ಷ ಕಡಿಮೆ ಮಾಡಬೇಕು. ಅದಕ್ಕಾಗಿ ಈ ಸಭೆ ನಡೆಸಲಾಗಿದೆ. ಆರೋಗ್ಯ ಇಲಾಖೆ ಕೊಟ್ಟಿರುವ ಸೂಚನೆಯನ್ನೂ ನೀಡಲಾಗಿದೆ. ಎಲ್ಲೆಲ್ಲಿ ಹೆಚ್ಚು ಜನ ಸೇರ್ತಾರೆ ಅಲ್ಲಿ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ, ಮಾಲ್ ಸ್ಥಳಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಮಾರ್ಷಲ್ಸ್ ಕೋವಿಡ್ ತಡೆಯಲು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರ ಜೊತೆ ವಾಗ್ವಾದವಾಗುತ್ತಿದೆ. ಅದನ್ನು ಸರಿಪಡಿಸಲು ಈ ಸಭೆ ಮಾಡಲಾಗಿದೆ.‌ ಮಾರ್ಷಲ್ಸ್​ಗೆ ಭದ್ರತೆ ನಾವು ನೀಡುತ್ತೇವೆ. ವಾರ್ಡ್ ಮಟ್ಟದಲ್ಲಿ ಅನೇಕ ಸಮಿತಿಗಳಿವೆ. ಪೊಲೀಸ್ ಸಿಬ್ಬಂದಿಯೂ ಮಾರ್ಷಲ್ಸ್ ಜೊತೆ ಸೇರಿ ಕೆಲಸ ಮಾಡಲಿದ್ದಾರೆ‌. ಮಾರ್ಷಲ್ಸ್​ಗೆ ಅಗತ್ಯ ರಕ್ಷಣೆ ಕೊಡಲಿದ್ದಾರೆ. ದೆಹಲಿಯಲ್ಲಿಯೂ ಕೋವಿಡ್ ಹೆಚ್ಚಳ ಆಗಿರೋದ್ರಿಂದ ಬಹಳ ಎಚ್ಚರಿಕೆಯಲ್ಲಿರಬೇಕಾಗುತ್ತದೆ ಎಂದರು.

ABOUT THE AUTHOR

...view details