ಬೆಂಗಳೂರು: ಮುಂಬೈ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪದ ಕುರಿತು ಮೂವರು ಶಾಸಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ನೇರವಾಗಿ ಹೆಸರು ಪ್ರಸ್ತಾಪಿಸಿಯೇ ಸಿಎಂ ಮುಂದೆ ಆಕ್ರೋಶ ಹೊರಹಾಕಿದ್ದಾರೆ.
ಭೋಜನ ವಿರಾಮದ ನಂತರ ನಡೆದ ಶಾಸಕರ ಜತೆಗಿನ ಸಮಾಲೋಚನಾ ಸಭೆಯಲ್ಲಿ ಸಿಎಂ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಶಾಸಕ, ನಾನು ನಿಮ್ಮ ಬಳಿ ಮಾತಾಡಬೇಕು, ನಾನು ನಿಮ್ಮ ಮಗನ ಬಳಿ ಯಾಕೆ ಮಾತಾಡಬೇಕು? ಎಲ್ಲದಕ್ಕೂ ಮಗನ ಮಾತೇ ಅಂತಿಮ ಮಾಡುವುದಾದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ನೀವು ಹಿರಿಯರಾಗಿ ಎಲ್ಲದಕ್ಕೂ ತಲೆದೂಗಿದರೆ ಹೇಗೆ? ಮಗನ ಹಸ್ತಕ್ಷೇಪ ಕಡಿಮೆ ಮಾಡಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ, ನಿಮ್ಮ ಸಮಸ್ಯೆ ಇದ್ದರೆ ನೇರವಾಗಿ ನನ್ನ ಬಳಿಯೇ ಬಂದು ಮಾತನಾಡಿ. ಅಧಿಕೃತ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶ ಇದೆ. ವಿಜಯಪುರದಲ್ಲಿ ಒಂದು, ಬೆಂಗಳೂರಿನಲ್ಲಿ ಒಂದು ಹೇಳಿಕೆ ಕೊಟ್ಟು ಪಕ್ಷ ಮತ್ತು ಸರ್ಕಾರಕ್ಕೆ ತೊಂದರೆ ಮಾಡಬೇಡಿ ಎಂದು ಬಿಎಸ್ವೈ ಹೇಳಿದ್ದಾರೆ.
ಯಾರು ತೊಂದರೆ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು ಎಂದು ಯತ್ನಾಳ್ ಸಭೆಯಲ್ಲಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. ಅವರಿಗೆ ಸಾಥ್ ನೀಡಿದ ಶಾಸಕ ಉಮೇಶ್ ಕತ್ತಿ, ಯಾವುದೇ ಕ್ಷೇತ್ರದಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಮಕ್ಕಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಹಿರಿಯ ಶಾಸಕರು ಎಲ್ಲದಕ್ಕೂ ಬೆಂಗಳೂರಿಗೆ ಬಂದು ಮಾತಾಡಲು ಆಗುವುದಿಲ್ಲ. ಫೋನ್ ಮೂಲಕವೂ ಸಮಸ್ಯೆ ಪರಿಹರಿಸಬೇಕು ಎಂದರು.
ಕಾರು ಹತ್ತಿ ಹೋದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಮೂವರು ಶಾಸಕರಿಂದ ಪ್ರಸ್ತಾಪವಾಗಿದ್ದು, ಸಾಕಷ್ಟು ಚರ್ಚೆ-ಜೋರು ಮಾತುಗಳು ನಡೆದವು. ಈ ವೇಳೆ ಮಧ್ಯೆ ಪ್ರವೇಶಿಸಿದ ಹಿರಿಯ ಸಚಿವರು, ವಿಷಯಾಂತರ ಮಾಡಿ ವಿಜಯೇಂದ್ರ ಹಸ್ತಕ್ಷೇಪ ವಿಷಯದ ಚರ್ಚೆಗೆ ಬ್ರೇಕ್ ಹಾಕಿದರು.
ನಂತರ ಕ್ಷೇತ್ರದ ಸಮಸ್ಯೆಗಳ ಕುರಿತು ಶಾಸಕರು ತಮ್ಮ ಮನವಿಗಳನ್ನು ಸಿಎಂ ಮುಂದೆ ಹೇಳಿಕೊಂಡರು. ಅನುದಾನ, ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಸಲ್ಲಿಸಿದರು. ಸಿಎಂ ಸಭೆ ಮುಗಿಸಿ ಸಿಟ್ಟಿನಲ್ಲೇ ಹೊರಟ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲಿಲ್ಲ. ನಾನು ಯಾವುದೇ ಹೇಳಿಕೆ ಕೊಡಲ್ಲ ಎಂದು ಗೊಣಗುತ್ತಾ ಕಾರು ಹತ್ತಿ ನಿರ್ಗಮಿಸಿದರು. ಉಮೇಶ್ ಕತ್ತಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.