ಬೆಂಗಳೂರು:ಮದ್ಯ ಮಾರಾಟ ಸಂಬಂಧ ನಿರ್ಧಾರ ಕೈಗೊಳ್ಳಲು ಸಿಎಂಗೆ ಅಧಿಕಾರ ನೀಡಲಾಗಿದ್ದು, ಈ ಬಗ್ಗೆ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು. ಅಲ್ಲದೆ ಯಾವ ವಲಯದಲ್ಲಿ ಎಷ್ಟು ಮದ್ಯ ಮಾರಾಟ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರೆಡ್ ಝೋನ್ಗಳಲ್ಲಿ ಯಾವೆಲ್ಲಾ ಅಂಗಡಿಗಳು, ಸೇವೆಗಳನ್ನು ಪ್ರಾರಂಭಿಸಬೇಕು ಎಂಬ ಬಗ್ಗೆ ಇಂದು ವಿಸ್ತೃತ ಚರ್ಚೆ ನಡೆದಿದೆ. ಎಲ್ಲರೂ ಆರ್ಥಿಕ ಚಟುವಟಿಕೆ ಶುರು ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಅದರ ಪ್ರಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮದ್ಯ ಮಾರಾಟ ಕುರಿತು ಸಿಎಂ ನಿರ್ಧಾರ ಅಂತಿಮ ವಲಯ ವಿಂಗಡನೆಗೆ ಕೇಂದ್ರಕ್ಕೆ ಪ್ರಸ್ತಾವನೆ
ಸಿಲಿಕಾನ್ ಸಿಟಿಯನ್ನು ಒಂದೇ ಯುನಿಟ್ ಆಗಿ ಪರಿಗಣಿಸುವ ಬದಲು ವಲಯವಾರು ವಿಂಗಡಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಒಂದು ಕೋಟಿ ಜನಸಂಖ್ಯೆ ಇರುವ ಮಹಾನಗರವನ್ನು ಒಂದು ವಲಯ ಎಂದು ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ವಲಯವಾರು ವಿಗಂಡನೆ ಮಾಡಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಮಹಾನಗರದಲ್ಲಿ ಕೊರೊನಾ ಪ್ರಕರಣ ಪತ್ತೆಯಾದರೆ ಇಡೀ ಸಿಟಿಯನ್ನೇ ಕೆಂಪು ವಲಯ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಾರ್ಪಾಡು ಮಾಡುವಂತೆ ಪಾಲಿಕೆ ಆಯುಕ್ತರು ಪತ್ರ ಬರೆಯಲಿದ್ದು, ಅದನ್ನು ನಾವು ಕೇಂದ್ರಕ್ಕೆ ಕಳುಹಿಸಿಕೊಡಲಿದ್ದೇವೆ ಎಂದು ತಿಳಿಸಿದರು.
28 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರನ್ನು ನಾಲ್ಕು ವಲಯವಾರುಗಳನ್ನಾಗಿ ವಿಂಗಡಿಸಲು ಪ್ರಸ್ತಾವನೆ ಸಲ್ಲಿಸುತ್ತೇವೆ. ಬೊಮ್ಮನಹಳ್ಳಿ ಮತ್ತು ಪಾದರಾಯನಪುರದಲ್ಲಿ ಸೋಂಕಿತರು ಹೆಚ್ಚಾಗಿದ್ದು, ಅವೆರಡು ಪ್ರದೇಶಗಳನ್ನು ಬಿಟ್ಟು ಉಳಿದ ಕಡೆ ಆರ್ಥಿಕ ಚಟುವಟಿಕೆ ನಡೆಯಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಸಂಪೂರ್ಣವಾಗಿ ಆರ್ಥಿಕ ಚಟುವಟಿಕೆ ನಿಂತು ಹೋಗುತ್ತದೆ ಎಂದು ವಿವರಿಸಿದರು.
ಕಾರ್ಮಿಕರು ವಲಸೆ ಹೋದರೆ ಸಮಸ್ಯೆ ಆಗುತ್ತದೆ. ಹಾಗಾಗಿ ಉದ್ಯೋಗ ಕಲ್ಪಿಸುವ ಸಲುವಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು, ಬೆಂಗಳೂರು ನಗರ ಡಿಸಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಇಂದು ಅವರು ಆದೇಶ ಹೊರಡಿಸಲಿದ್ದಾರೆ ಎಂದರು.