ಬೆಂಗಳೂರು: ದೇವಸ್ಥಾನಗಳಿಗೆ ಸ್ವಾತಂತ್ರ್ಯ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ ಎಂದು ಹೇಳಿದರು.
ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ದೇವಸ್ಥಾನಗಳನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ದೇವಸ್ಥಾನಗಳನ್ನು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ. ಡಿಕೆಶಿ ಅವರ ಅಭಿಪ್ರಾಯ ಹಿಂದೂ ದೇವಸ್ಥಾನಗಳ ವಿರುದ್ಧ ಮತ್ತು ಹಿಂದೂ ಭಕ್ತರ ವಿರುದ್ಧ ಇರೋದು ಇದರಿಂದ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಡೀ ದೇಶದಲ್ಲಿ ಕೋವಿಡ್, ಒಮಿಕ್ರಾನ್ ಹೆಚ್ಚಾಗ್ತಿದೆ. ಎಂಟು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಅಂತ ಕೇಂದ್ರ ಗುರುತಿಸಿದೆ. ಸರ್ಕಾರದಿಂದ ಹಲವು ಮುಂಜಾಗ್ರತೆ ತೆಗೆದುಕೊಂಡಿದ್ದೇವೆ. ಆಕ್ಸಿಜನ್ ಬೆಡ್ಗಳು, ಆರೋಗ್ಯ ಸೌಕರ್ಯಗಳನ್ನು ಒದಗಿಸುತ್ತಿದ್ದೇವೆ. ಕೇಸ್ಗಳಿಗೆ ಅನುಗುಣವಾಗಿ ಮೆಡಿಕಲ್ ವ್ಯವಸ್ಥೆ ಮಾಡ್ಕೊಳ್ತಿದ್ದೇವೆ. ಇಡೀ ದೇಶದಲ್ಲಿ ಕೋವಿಡ್ ಜಾಸ್ತಿ ಆಗ್ತಿದೆ. ಬರುವ ದಿನಗಳಲ್ಲಿ ಕೇಸ್ಗಳು ಯಾವ ರೀತಿ ಆಗ್ತಿವೆ ನೋಡಿಕೊಂಡು ಕ್ರಮಗಳನ್ನು ಕೈಗೊಳ್ತೇವೆ ಎಂದು ಸಿಎಂ ಇದೇ ವೇಳೆ ಹೇಳಿದರು.