ಬೆಂಗಳೂರು: ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹಣ ಇಲ್ಲದಿದ್ದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿ ಎಂದು ಕಟುವಾಗಿ ಟೀಕಿಸಿದೆ.
2017-18ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ 50 ತಾಲೂಕುಗಳಿಗೆ ಕಚೇರಿಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬೀದರ್ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಪೀಠಕ್ಕೆ ಲಿಖಿತ ಮಾಹಿತಿ ಸಲ್ಲಿಸಿ, ಹಣಕಾಸು ಕೊರತೆಯಿಂದಾಗಿ ಹೊಸ ತಾಲೂಕುಗಳಿಗಲ್ಲಿ ಕಚೇರಿಗಳನ್ನು ಸ್ಥಾಪಿಸಿಲ್ಲ. ಕಚೇರಿಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಹಣಕಾಸು ಇಲಾಖೆ ಕೋರಿದೆ. ಕೋವಿಡ್ ಹಿನ್ನಲೆಯಲ್ಲಿ ಸರ್ಕಾರದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ತೆರಿಗೆ ಸಂಗ್ರಹವೂ ಇಳಿಕೆಯಾಗಿದೆ. ಹೀಗಾಗಿ ಹಂತ-ಹಂತವಾಗಿ ನೆರವು ನೀಡಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ವಿವರಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಹೊಸ ತಾಲೂಕುಗಳನ್ನು ರಚಿಸುವಂತೆ ಹೈಕೋರ್ಟ್ ಹೇಳಿರಲಿಲ್ಲ. ಸರ್ಕಾರ ತಾನೇ ತೀರ್ಮಾನಿಸಿ ಹೊಸ ತಾಲೂಕುಗಳನ್ನು ಘೋಷಿಸಿದೆ. ಈಗ ಹಣಕಾಸಿನ ಕೊರತೆ ಇದೆ, ಆರ್ಥಿಕ ಇಲಾಖೆ ಅಸಹಾಯಕತೆ ತೋರುತ್ತಿದೆ ಎನ್ನುತ್ತೀರಿ. ಹೀಗಾಗಿ ಹೊಸ ತಾಲೂಕುಗಳನ್ನು ಸದ್ಯ ರದ್ದುಪಡಿಸಿ, ಅರ್ಥಿಕವಾಗಿ ಚೇತರಿಸಿಕೊಂಡ ಮೇಲೆ ಅವುಗಳಿಗೆ ಕಚೇರಿ ಹಾಗು ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಯೋಚಿಸಿ ಎಂದಿದೆ.
ಇದೇ ವೇಳೆ, ರಾಜ್ಯ ಸರ್ಕಾರ ಈ ಕುರಿತಂತೆ ಸಲ್ಲಿಸಿರುವ ಪ್ರಮಾಣಪತ್ರ ಸಮಧಾನಕರವಾಗಿಲ್ಲ. ಹೊಸ ತಾಲೂಕುಗಳಿಗೆ ಕಚೇರಿ ಸ್ಥಾಪನೆಗೆ 2020ರ ಫೆ.3ರಂದೆ ಕಾಲಮಿತಿ ನಿಗದಿಪಡಿಕೊಳ್ಳಲು ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಸರ್ಕಾರ ಈ ಕುರಿತು ಸ್ಷಷ್ಟವಾಗಿ ಏನನ್ನೂ ಹೇಳಿಲ್ಲ. ಅಸ್ಪಷ್ಟ ಪ್ರಮಾಣಪತ್ರದ ಬದಲಿಗೆ ಹೊಸದಾಗಿ ಸಮರ್ಪಕವಾದ ಪ್ರಮಾಣಪತ್ರ ಸಲ್ಲಿಸಿ. ಯಾವುದೇ ಅಡೆತಡೆಗಳಿಲ್ಲದೆ ಹೊಸ ತಾಲೂಕುಗಳ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಿ. ವಿಫಲವಾದಲ್ಲಿ ಮುಂದಿನ ವಿಚಾರಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಿತು.
ಇದನ್ನೂ ಓದಿ:ಸಿಡಿ ಕೇಸ್ : ವಿಶೇಷ ತನಿಖಾದಳದ ತನಿಖೆ ಅನುಮೋದಿಸಿದ ಎಸ್ಐಟಿ ಮುಖ್ಯಸ್ಥ