ಬೆಂಗಳೂರು: ಬಿಹಾರದಿಂದ ರಾಜಧಾನಿಗೆ ಬಂದು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪರವಾನಗಿ ಇಲ್ಲದೇ ಕಂಟ್ರಿಮೇಡ್ ಪಿಸ್ತೂಲ್ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಸೋನು ಕುಮಾರ್, ಸುನಿಲ್ ಕುಮಾರ್, ಇರ್ಫಾನ್ ಹಾಗೂ ಮದನ್ಪಲ್ಲಿ ಮೂಲದ ಮುರುಳಿ ಬಂಧಿತ ಆರೋಪಿಗಳು. ಬಂಧಿತರಿಂದ 2 ಪಿಸ್ತೂಲ್ ಹಾಗೂ ಐದು ಜೀವಂತ ಗುಂಡು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಿಹಾರ ಮೂಲದ ಸೋನುಕುಮಾರ್ ಗ್ಯಾಂಗ್ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಪಿಸ್ತೂಲ್ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಬಿಹಾರದ ಸುಲ್ತಾನ್ ಗಂಜ್ನ ಲೂತನ್ ಸಿಂಗ್ ಎಂಬಾತನಿಂದ ಅಕ್ರಮವಾಗಿ ನಾಡ ಪಿಸ್ತೂಲ್ ಖರೀದಿ ಮಾಡಿ ನಗರದಲ್ಲಿ ಒಂದು ಪಿಸ್ತೂಲ್‌ಗೆ ಒಂದರಿಂದ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ. ಇದೇ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ದಂಧೆಕೋರರು ಬೈಕಿನಲ್ಲಿ ಪಿಸ್ತೂಲ್ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮದನಪಲ್ಲಿ ಮೂಲದ ಮುರುಳಿ ಎಂಬಾತ ನಾಡ ಪಿಸ್ತೂಲ್ ಮಾರಾಟ ಮಾಡಿರುವ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಬಾಗಲೂರಿನಲ್ಲಿ ಕೆಲಸ ಮಾಡುತ್ತಿದ್ದ ಪಿಸ್ತೂಲ್ ಗ್ಯಾಂಗ್ನ ಇಬ್ಬರು ಆರೋಪಿಗಳು ಹಣ ಸಂಪಾದನೆಗಾಗಿ ಪುಲಕೇಶಿನಗರ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ಮಾರಾಟಕ್ಕೆ ಬಂದಿದ್ದರು. ಖರೀದಿಗೆ ಬಂದಿದ್ದ ವ್ಯಕ್ತಿಯ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಯಾವ ಕಾರಣಕ್ಕಾಗಿ ಪಿಸ್ತೂಲ್ ಖರೀದಿಗೆ ಮುಂದಾಗಿದ್ದ ಎಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಬಂಧಿತ ಬಿಹಾರ ಗ್ಯಾಂಗ್ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಬಿಹಾರದಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರೋ ಬಗ್ಗೆ ಬಿಹಾರ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.