ಕರ್ನಾಟಕ

karnataka

ETV Bharat / city

ಆಟೋ ಚಾಲಕನ ಸಮಯ ಪ್ರಜ್ಞೆ,ಮಾನವೀಯತೆ: ಪೋಷಕರ ಮಡಿಲು ಸೇರಿದ ಮಗು - ದಾರಿ ತಪ್ಪಿಸಿಕೊಂಡಿದ್ದ ಮಗು

ಶಾಲೆಗೆ ತೆರಳಿದ್ದ ಮೊದಲ ದಿನವೇ ದಾರಿ ತಿಳಿಯದೇ 1ನೇ ತರಗತಿ ವಿದ್ಯಾರ್ಥಿಯೋರ್ವ ದಾರಿ ತಪ್ಪಿದ್ದನು. ಆಟೋ ಚಾಲಕನ ಸಮಯಪ್ರಜ್ಞೆಯಿಂದಾಗಿ ಮಗು ಇದೀಗ ಪೋಷಕರ ಮಡಿಲು ಸೇರಿದೆ.

Auto driver
Auto driver

By

Published : Oct 27, 2021, 5:14 AM IST

ಬೆಂಗಳೂರು:ಶಾಲೆಗೆ ಹೋದ ಮೊದಲ ದಿನವೇ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕನೊಬ್ಬ ಆಟೋ ಚಾಲಕರ ಸಮಯ ಪ್ರಜ್ಞೆಯಿಂದ ಮತ್ತೆ ಪೋಷಕರ ಮಡಿಲು ಸೇರಿರುವ ಮಾನವೀಯ ಪ್ರಸಂಗ ಚಾಮರಾಜಪೇಟೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಅಜಿತ್ ದಂಪತಿ ಪುತ್ರ ರೋಹನ್(6) ಪೋಷಕರ ಮಡಿಲು ಸೇರಿದ ವಿದ್ಯಾರ್ಥಿ. ರೋಹನ್‌ನನ್ನು ರಕ್ಷಿಸಿದ ಆಟೋ ಚಾಲಕ ಗೋವಿಂದರಾಜುರ ಸಮಯ ಪ್ರಜ್ಞೆಗೆ ಪೊಲೀಸರು, ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಅಡುಗೆ ಕೆಲಸ ಮಾಡುತ್ತಿದ್ದ ದಂಪತಿ: ಅಜಿತ್ ದಂಪತಿ ಚಾಮರಾಜಪೇಟೆಯ ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ರಾಘವೇಂಧ್ರ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪುತ್ರ ರೋಹನ್‌ನನ್ನು ಚಾಮರಾಜಪೇಟೆಯಲ್ಲಿರುವ ಶ್ರೀರಾಮಂದಿರ ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿಸಿದ್ದರು. ಶಾಲೆಗೆ ಮೊದಲ ದಿನವಾದ್ದರಿಂದ ಅಜಿತ್ ಮಂಗಳವಾರ ಬೆಳಗ್ಗೆ ರೋಹನ್‌ನನ್ನು ಶಾಲೆಗೆ ಬಿಟ್ಟು ಹೋಗಿದ್ದರು ಎಂದು ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಟೋ ಡ್ರೈವರ್ ಗೋವಿಂದ್​ರಾಜು

ಏಕಾಂಗಿಯಾಗಿ ಓಡಾಡುತ್ತಿದ್ದ ಬಾಲಕ:ಮಧ್ಯಾಹ್ನ 12 ಸುಮಾರಿಗೆ ಶಾಲೆಯ ಶೌಚಾಲಯಕ್ಕೆ ತೆರಳಿದ್ದ ರೋಹನ್‌ಗೆ ಯಾರೋ ಶಾಲೆಗೆ ರಜೆ ಎಂದು ಹೇಳಿದ್ದಾರೆ. ಆಗ ಶಾಲೆ ಬಿಟ್ಟು ರಸ್ತೆಗೆ ಬಂದಿದ್ದಾನೆ. ಎಲ್ಲಿಗೆ ಹೋಗಬೇಕೆಂದು ತೋಚದೆ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಆಗ ಅದೇ ಮಾರ್ಗದಲ್ಲಿ ಬಂದ ಆಟೋ ಚಾಲಕ ಗೋವಿಂದರಾಜು ಸಾಹಿತ್ಯ ಪರಿಷತ್ ರಸ್ತೆಯ ಬದಿಯಲ್ಲಿ ಏಕಾಂಗಿಯಾಗಿ ಓಡಾಡುತ್ತಿದ್ದ ರೋಹನ್‌ನನ್ನು ನೋಡಿ ಮಾತನಾಡಿಸಿದ್ದಾರೆ. ಆದರೆ, ಹೊಸ ಜಾಗ ಹಾಗೂ ಕನ್ನಡ ಭಾಷೆ ಬಾರದೇ ರೋಹನ್ ಅಳಲು ಆರಂಭಿಸಿದ್ದಾನೆ. ಬಳಿಕ ಸಮಾಧಾನಪಡಿಸಿದ ಗೋವಿಂದರಾಜು ಆಟೋದಲ್ಲಿ ಕೂರಿಸಿಕೊಂಡು ವಿ.ವಿ.ಪುರಂ ಪೊಲೀಸ್ ಠಾಣೆಗೆ ಕರೆತಂದು ನಡೆದ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ: ಅಜಿತ್ ಮಧ್ಯಾಹ್ನ ಶಾಲೆ ಬಳಿ ಹೋದಾಗ ಪುತ್ರ ಸಿಕ್ಕಿರಲಿಲ್ಲ. ಶಾಲೆಯಲ್ಲಿ ವಿಚಾರಿಸಿದಾಗ ಸರಿಯಾದ ಮಾಹಿತಿ ಸಿಕ್ಕಿಲ್ಲ. ಬಳಿಕ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದರು. ಬಳಿಕ ಶಾಲೆ ಸಮೀಪದ ಸಿಸಿ ಕ್ಯಾಮೆರಾ ಶೋಧಿಸಿದ್ದಾರೆ. ಈ ವೇಳೆ ರೋಹನ್ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿತ್ತು. ಆಗ ಸಿಬ್ಬಂದಿ ವೈರ್‌ಲೆಸ್ ಮೂಲಕ ಸಮೀಪದ ಎಲ್ಲ ಠಾಣೆಗೆ ಮಾಹಿತಿ ರವಾನಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ... ಮದುವೆ ಮಾತು ಬಂದಾಗ ಯುವತಿ ಕೊಲೆಗೈದ!

ಪೋಷಕರಿಗೆ ಬಾಲಕನನ್ನು ಒಪ್ಪಿಸಿದ ಪೊಲೀಸರು: ವೈರ್‌ಲೆಸ್‌ನಲ್ಲಿ ಮಾಹಿತಿ ಪಡೆದ ವಿಶ್ವೇಶ್ವರಪುರಂ ಠಾಣೆ ಪೊಲೀಸ್ ಸಿಬ್ಬಂದಿ, ಕಾಣೆಯಾಗಿದ್ದ ಬಾಲಕ ತಮ್ಮ ಠಾಣೆಯಲ್ಲಿರುವುದಾಗಿ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ರೋಹನ್‌ನನ್ನು ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಶಾಲೆಗೆ ಎಚ್ಚರಿಕೆ: ಈ ಘಟನೆ ಬೆನ್ನಲ್ಲೇ ಚಾಮರಾಜಪೇಟೆ ಪೊಲೀಸ್ ಸಿಬ್ಬಂದಿ ರಾಮಮಂದಿರ ಶಾಲೆಗೆ ತೆರಳಿ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಬುಧವಾರ ಡಿಸಿಪಿ ಸಂಜೀವ್ ಪಾಟೀಲ್ ಸನ್ಮಾನ:ಗೋವಿಂದರಾಜು ಕೋವಿಡ್ ಸಮಯದಲ್ಲಿ ಕೂಡ ರೋಗಿಗಳಿಗೆ ಉಚಿತ ಆಟೋ ಸೇವೆ ಕಲ್ಪಿಸಿದ್ದರು.ಈ ಎಲ್ಲಾ ಮಾನವೀಯ ಗುಣಗಳನ್ನು ಗಮನಿಸಿರುವ ಡಿಸಿಪಿ ಸಂಜೀವ್ ಪಾಟೀಲ್ ಸನ್ಮಾನಿಸಲು ಖುದ್ದು ಕರೆ ಮಾಡಿ ಅಹ್ವಾನಿಸಿದ್ದು ಪೋಷಕರು ಸಹ ಜೊತೆಗೂಡಲಿದ್ದಾರೆ. ಈ ವಿಚಾರವಾಗಿ ಗೋವಿಂದರಾಜುರಿಗೆ ಕರೆ ಮಾಡಿದಾಗ ತಮ್ಮ ಕೆಲಸಗಳ ಬಗ್ಗೆ ತನಗೆ ತೃಪ್ತಿಯಿದ್ದು ಸನ್ಮಾನ ಸ್ವೀಕರಿಸಲು ಮಗು ಮತ್ತು ಪೋಷಕರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details