ಬೆಂಗಳೂರು: ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯೊಬ್ಬರು ಮಹಿಳೆಯ ಮಗುವನ್ನು 5 ಸಾವಿರಕ್ಕೆ ಮಾರಾಟ ಮಾಡಿರುವುದು ನಿಜ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ವಿಧಾನಸಭೆ ಕಲಾಪಕ್ಕೆ ತಿಳಿದ್ದಾರೆ.
ಶಾಸಕ ಎಂಬಿ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಗು ಮಾರಿದ್ದ ದಾದಿ ಹಾಗೂ ಆಕೆಯೊಂದಿಗೆ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಇದೆ. ಮಹಿಳೆಯ ಮನೆಯವರೂ ಗಲಾಟೆ ಮಾಡಿ ನಮಗೆ ಗೊತ್ತಿಲ್ಲದೇ ಮಗು ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ. ಬಡವರ ಮಕ್ಕಳನ್ನು ನಾಲ್ಕೈದು ಸಾವಿರಕ್ಕೆ ಅನಾಮಧೇಯರು ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ. ಆದರೆ ಈ ಪ್ರಕರಣದಲ್ಲಿ ದಾದಿ ಹಾಗೂ ಅವರ ಜೊತೆ ಇದ್ದವರು ಗೊತ್ತಿರುವುದರಿಂದ ತನಿಖೆಗೆ ಅಡ್ಡಿಯಾಗಲ್ಲ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂ. ಬಿ.ಪಾಟೀಲ್
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಬಿ.ಪಾಟೀಲ್, ವಿಜಯಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮಗು ಮಾರಾಟ ಆಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಡಿಸಿ, ಎಸ್ಪಿ ಬಳಿ ಮಾತನಾಡಿದಾಗ ಗಂಡು ಮಗು ಅಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಮೇಲೆ ನರ್ಸ್ ಮಹಿಳೆಗೆ ಪುಸಲಾಯಿಸಿದ್ದಾಳೆ.
ನರ್ಸ್, ಆಕೆಯ ಪತಿ ಹಾಗೂ ಮತ್ತೊಬ್ಬ ವ್ಯಕ್ತಿ ಮೂವರು ಸೇರಿ ಮಗುವನ್ನು 3 ರಿಂದ 5 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಇದನ್ನು ಡಿಸಿ, ಎಸ್ಪಿ ಅವರು ಕನ್ಫರ್ಮ್ ಮಾಡಿದ್ದಾರೆ. ಮಗು ಮಾರಾಟ ಮಾಡಿರುವುದು ಹೇಯ ಕೃತ್ಯವಾಗಿದೆ. ಬೆಳಗ್ಗೆ ಮಾರಾಟ ಮಾಡಿದ್ದ ಮಹಿಳೆ ಮತ್ತೆ ಸಂಜೆ ಹೋಗಿ ನನಗೆ ಮಗು ಬೇಕು ಅಂತ ಹೋಗಿದ್ದಾರೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು ಎಂದು ಪ್ರಶ್ನಿಸಿದರು.