ಬೆಂಗಳೂರು: ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಮೊಮ್ಮಗ ವಿನಯ್ ಶ್ಯಾಮ್ ನೇತೃತ್ವದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿತು.
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಆಗಮಿಸಿದ್ದ ಕಾರ್ಯಕರ್ತರು ತೀವ್ರ ಒತ್ತಡ ಹೇರಿದರು. ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯದವರು ಆಗಮಿಸಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಗೂ ಬಾಗೇಪಲ್ಲಿಯಿಂದ ವಿಧಾನಸಭೆ ಚುನಾವಣೆಗೆ ಅವರ ಪುತ್ರ ರಕ್ಷಾ ರಾಮಯ್ಯಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿ ತೆರಳಿದ್ದರು. ಇದಾಗಿ 24 ಗಂಟೆ ಕಳೆಯುವ ಮುನ್ನವೇ ಇನ್ನೊಂದು ತಂಡ ಟಿಕೆಟ್ಗಾಗಿ ಲಾಬಿ ನಡೆಸಿದೆ.
2013 ಹಾಗೂ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ.ಕೆ.ಸುಧಾಕರ್ ಪಕ್ಷ ತೊರೆದು 2019ರಲ್ಲಿ ಉಪಚುನಾವಣೆ ಎದುರಿಸುವ ಮೂಲಕ ಬಿಜೆಪಿಯಿಂದ ಗೆಲುವು ಸಾಧಿಸಿ ಮಂತ್ರಿಯಾಗಿದ್ದಾರೆ. ಸುಧಾಕರ್ ಪಕ್ಷ ತ್ಯಜಿಸಿದ ನಂತರ ಸಾಕಷ್ಟು ನಾಯಕರು ಟಿಕೆಟ್ಗಾಗಿ ಲಾಬಿ ನಡೆಸಿದ್ದು, ಆರ್.ಎಲ್.ಜಾಲಪ್ಪನವರ ಮೊಮ್ಮಗ ವಿನಯ್ ಸಹ ಇವರಲ್ಲಿ ಒಬ್ಬರು.
ಅನಿವಾಸಿ ಭಾರತೀಯ ನವೀನ್ ಕೃಷ್ಣ ಸಹ ಕಳೆದ ಸಾರಿ ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಪಕ್ಷ 2013ರಲ್ಲಿ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ತ್ಯಜಿಸಿದ್ದ ಅಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಆಂಜಿನಪ್ಪಗೆ 2019ರ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಈ ಸಂದರ್ಭ ಆಕಾಂಕ್ಷಿಗಳಾಗಿದ್ದ ನವೀನ್ ಹಾಗೂ ವಿನಯ್ ಇಬ್ಬರು ನಿರಾಶೆಗೆ ಒಳಗಾಗಿದ್ದರು. ಇದೀಗ ಚುನಾವಣೆಗೆ ಒಂದು ವರ್ಷ ಮುನ್ನವೇ ವಿನಯ್ ಶ್ಯಾಮ್ ಪರವಾಗಿ ಅವರ ಅಭಿಮಾನಿಗಳು ಲಾಬಿ ಆರಂಭಿಸಿದ್ದಾರೆ.
2013ರಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷವನ್ನು ತ್ಯಜಿಸಿದ್ದ ಆಂಜಿನಪ್ಪಗೆ ಮತ್ತೊಮ್ಮೆ ಅವಕಾಶ ನೀಡುವುದು ಸರಿಯಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ಗೆ ಸೂಕ್ತ ಪ್ರತಿ ಸ್ಪರ್ಧಿಯಾಗಿ ನಿಲ್ಲಲು ವಿನಯ್ ಒಬ್ಬರೇ ಸಮರ್ಥರು. ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ತಾವು ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದು, ಟಿಕೆಟ್ ನೀಡುವ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.
ನವಸಂಕಲ್ಪ ಚಿಂತನ ಶಿಬಿರ:ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳವಾರ ಆಯೋಜಿಸಿದ್ದ ನವಸಂಕಲ್ಪ ಚಿಂತನ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು. ಈ ವೇಳೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಶಿವಣ್ಣ, ಸೌಮ್ಯಾರೆಡ್ಡಿ, ಎಂಎಲ್ಯು.ಬಿ. ವೆಂಕಟೇಶ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ, ಮಾಜಿ ಮೇಯರ್ಗಳಾದ ಜೆ.ಹುಚ್ಚಪ್ಪ, ಪಿ. ಆರ್. ರಮೇಶ್, ಮುಖಂಡರಾದ ಬಿ.ಎಲ್. ಶಂಕರ್, ಕೆ.ಎಂ. ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ:ಮುಂದಿನ ಸಂಪುಟದಲ್ಲಿ ನೂತನ ಉದ್ಯೋಗ ನೀತಿ ಮಂಡಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ