ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ/ ರಾಜಕಾರಣಿ ರಮ್ಯಾ, ಇದೀಗ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ವಿರುದ್ಧ ಗುಡುಗಿದ್ದಾರೆ. ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಅವರು, ಈ ಹುಡುಗ ನಲಪಾಡ್ ಗೌರವಾನ್ವಿತ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ. ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದು (ಜಾಮೀನಿನ ಮೇಲೆ) ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾನೆ. ವಾಹ್! ಎಂದು ಗರಂ ಆಗಿದ್ದಾರೆ.
ಇದನ್ನೂ ಓದಿ:ಡಿಕೆಶಿ ಹೇಳಿಕೆಗೆ ರಮ್ಯಾ ಭಿನ್ನರಾಗ; ಬಂಡೆಗೆ ಸೆಡ್ಡು ಹೊಡೆದ್ರಾ ಪದ್ಮಾವತಿ!?
ಅದ್ವೈತ್ ವಿರುದ್ಧ ಹಲ್ಲೆ ನಡೆಸಿದ ಘಟನೆ ಹಾಗೂ ಮೇಖ್ರಿ ವೃತ್ತ ಅಂಡರ್‌ಪಾಸ್ ಬಳಿ ವಿದೇಶಿ ಕಾರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಗುದ್ದಿರುವ ಮಾಧ್ಯಮ ವರದಿಯ ತುಣುಕುಗಳನ್ನು ಲಗತ್ತಿಸಿ ಟ್ವೀಟ್ ಮಾಡಿರುವ ರಮ್ಯಾ, ಬೆಂಗಳೂರಿನ ಗಾಯತ್ರಿದೇವಿ ಉದ್ಯಾನದಲ್ಲಿ ತಮ್ಮ ಮೇಲೆ ನಲಪಾಡ್ ಹಲ್ಲೆ ನಡೆಸಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತ ಸಚಿನ್ ಗೌಡ ನೀಡಿರುವ ದೂರಿನ ಸುದ್ದಿಯ ಪ್ರತಿಯನ್ನೂ ಸೇರಿಸಿದ್ದಾರೆ.
ಇದನ್ನೂ ಓದಿ:ರಮ್ಯಾ ಟ್ವೀಟ್ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ: ಡಿಕೆಶಿ
ರಮ್ಯಾಗೆ ನಟರಾಜ ಗೌಡ ಬೆಂಬಲ:ಕೆಪಿಸಿಸಿ ಮಾಧ್ಯಮ ವಿಭಾಗದ ಮಾಜಿ ಮುಖ್ಯಸ್ಥ ಎ.ಎನ್.ನಟರಾಜಗೌಡ ಟ್ವೀಟ್ ಮಾಡುವ ಮೂಲಕ ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ನಲ್ಲಿ, ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ ರಮ್ಯಾ ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ಗಳನ್ನು ಮಾಡುತ್ತಿರುವುದು ಸರಿಯಲ್ಲ. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಆರ್.ನಾಯ್ಡು ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ ಎಂದು ಸಲಹೆ ಕೊಟ್ಟಿದ್ದಾರೆ.