ಕರ್ನಾಟಕ

karnataka

ETV Bharat / city

ಲಾಕ್​ಡೌನ್​ ವೇಳೆ ಎಗ್ಗಿಲದೆ ನಡೆದಿದೆ ವನ್ಯಜೀವಿಗಳ ಹತ್ಯೆ

ವನ್ಯಜೀವಿ ಹತ್ಯೆ ಹಾಗೂ ಅರಣ್ಯ ಉಳಿಸಲು ಕೇಂದ್ರ ಸರ್ಕಾರವು, 1970ರ ದಶಕದಲ್ಲಿಯೇ ಕಾನೂನು ಜಾರಿಗೆ ತಂದು ಅನುಷ್ಠಾನ ಮಾಡಿದೆ.‌ ಆದರೆ, ಅದು ಜಾರಿಗೆ ಬರಲು ಎರಡು ದಶಕಗಳೇ ಬೇಕಾದವು. ಈ ಕಾಯ್ದೆಯಿಂದ ಅರಣ್ಯ ಭೂಮಿ ರಕ್ಷಣೆ ಆಗಿದ್ದು, ಅದೇ ರೀತಿ ವನ್ಯ ಪ್ರಾಣಿಗಳ ಸಂಖ್ಯೆಯಲ್ಲಿ ಕೂಡ‌ ಏರಿಕೆಯಾಗಿದೆ.

Wild life crimes
ವನ್ಯಜೀವಿಗಳ ಹತ್ಯೆ

By

Published : Nov 30, 2020, 7:21 PM IST

ಬೆಂಗಳೂರು: ವನ್ಯಜೀವಿಗಳ ಸಂರಕ್ಷಣೆಯು ಭಾರತದ ಸಾಂಸ್ಕೃತಿಕ ನೀತಿಗಳಲ್ಲಿ ಒಂದು ಭಾಗವಾಗಿದ್ದು, ಅದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ. ಭಾರತ ದೇಶ ಹಲವು ಜೈವಿಕ ಜೀವಿಗಳ ಆವಾಸಸ್ಥಾನವಾಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ನಮ್ಮಲ್ಲಿ ಕಟ್ಟು ನಿಟ್ಟಿನ ಕಾನೂನುಗಳಿವೆ. ಆದರೂ ಕಾಡು ಪ್ರಾಣಿಗಳನ್ನು ಬೇಟೆಯಾಡಿ ವಿಕೃತಿ ಮೆರೆಯುವ ಮನಸ್ಸುಗಳು ಕಮ್ಮಿಯಾಗಿಲ್ಲ.

ವನ್ಯಜೀವಿ ಹತ್ಯೆ ಹಾಗೂ ಅರಣ್ಯ ಉಳಿಸಲು ಕೇಂದ್ರ ಸರ್ಕಾರವು, 1970ರ ದಶಕದಲ್ಲಿಯೇ ಕಾನೂನು ಜಾರಿಗೆ ತಂದು ಅನುಷ್ಠಾನ ಮಾಡಿದೆ.‌ ಆದರೆ, ಅದು ಜಾರಿಗೆ ಬರಲು ಎರಡು ದಶಕಗಳೇ ಬೇಕಾದವು. ಈ ಕಾಯ್ದೆಯಿಂದ ಅರಣ್ಯ ಭೂಮಿ ರಕ್ಷಣೆ ಆಗಿದ್ದು, ಅದೇ ರೀತಿ ವನ್ಯ ಪ್ರಾಣಿಗಳ ಸಂಖ್ಯೆಯಲ್ಲಿ ಕೂಡ‌ ಏರಿಕೆಯಾಗಿದೆ. ವನ್ಯ ಜೀವಿಗಳನ್ನು ಬೇಟೆಯಾಡಿದರೆ ಕಠಿಣ ಶಿಕ್ಷೆಯಾಗುತ್ತದೆ. ಆದರೂ ಕೂಡ ಜನರು ಕಾಡು ಪ್ರಾಣಿಗಳನ್ನು ಬೇಟೆಯಾಡುವುದನ್ನು ಬಿಟ್ಟಿಲ್ಲ. ಇದರ ನಡುವೆ ಇತ್ತೀಚೆಗೆ ಜನರಿಗೆ ಸಾಮಾಜಿಕ ಜಾಲಾತಾಣದ ಹುಚ್ಚು ನೆತ್ತಿಗೇರಿದ್ದು, ವನ್ಯಜೀವಿಗಳನ್ನು ಬೇಟೆಯಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವೃತ್ತಿ ಹೆಚ್ಚಾಗಿದೆ.

ಇನ್ನು ಶಿವಮೊಗ್ಗ ಕಳೆದ ಒಂದು ವರ್ಷದಲ್ಲಿ 44 ವನ್ಯಜೀವಿ ಬೇಟೆ ಪ್ರಕರಣಗಳು ನಡೆದಿದ್ದು, ಬೇಟೆಯಾಡಿರುವುದನ್ನು ಪತ್ತೆ ಮಾಡಿ ಅರಣ್ಯ ಇಲಾಖೆಯು ಸೂಕ್ತ ಕಾನೂನಿನ ರೀತಿ ಶಿಕ್ಷೆಗೆ ಒಳಪಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಡು ಹಂದಿ ಹಾಗೂ ಜಿಂಕೆಗಳ ಬೇಟೆ ಸಾಕಷ್ಟು ನಡೆದಿದ್ದು, ಕಾಡಂಚಿನಲ್ಲಿ ವಾಸ ಮಾಡುವವರು ಹೆಚ್ಚಾಗಿ ಅವುಗಳನ್ನು ಬೇಟೆಯಾಡುತ್ತಾರೆ. ಲಾಕ್‌ಡೌನ್ ಅವಧಿಯಲ್ಲಿ ಅತೀ ಹೆಚ್ಚು ಬೇಟೆ ಪ್ರಕರಣಗಳು ದಾಖಲಾಗಿದ್ದು, ಮಾಂಸ ಮತ್ತು ವ್ಯಾಪಾರಕ್ಕಾಗಿ ಪ್ರಾಣಿಗಳನ್ನು ಕೊಂದಿದ್ದಾರೆ. ಸಾಗರ ವಿಭಾಗದಲ್ಲಿ ಅಪರೂಪದ‌ ಕೆಂದಳಿಲು, ಪುನುಗು ಬೆಕ್ಕು ಬೇಟೆಯ ಎರಡು ಪ್ರಕರಣಗಳು ನಡೆದಿದ್ದು, ಇತ್ತಿಚೆಗೆ ಸಾಗರ ತಾಲೂಕು ಆನಂದಪುರಂ ಬಳಿ ಚಿರತೆ ಉಗುರು ಮಾರಾಟ ಜಾಲವನ್ನು ಪತ್ತೆ ಮಾಡಲಾಗಿತ್ತು.

ವನ್ಯಜೀವಿಗಳ ಹತ್ಯೆ ಕುರಿತು ವರದಿ

ಇನ್ನು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಪ್ರದೇಶಗಳು ಬರುವುದರಿಂದ, ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ರೈತರು ಬೆಳೆದ ಬೆಳೆಗಳು ನಾಶಪಡಿಸುತ್ತಿವೆ. ಜನಸಂಖ್ಯೆ ಹೆಚ್ಚಾದಂತೆಲ್ಲ ಅರಣ್ಯ ಪ್ರದೇಶ ಒತ್ತುವರಿ ಮಾಡಿ, ಬೆಳೆಯನ್ನು ಬೆಳೆಯಲು ಆರಂಭಿಸಲಾಗಿದ್ದು, ಕಾಡು ಪ್ರಾಣಿಗಳು ಆಹಾರ ಅರಸಿ ಬಂದಾಗ ಮನುಷ್ಯರು ಮತ್ತು ವನ್ಯ ಜೀವಿಗಳ ನಡುವೆ ಘರ್ಷಣೆ ಸಹಜವಾಗಿದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ದೊಡ್ಡ ಗುಂಡಿಗಳನ್ನು ತೆಗೆಯುತ್ತಾರೆ. ಹಾಗೂ ಬಲೆಯನ್ನು ಹಾಕುತ್ತಾರೆ. ಈ ವೇಳೆ ಕಾಡು ಪ್ರಾಣಿಗಳ ಕೊಲ್ಲುವ ಪ್ರಕರಣಗಳು ನಡೆಯುತ್ತಿದ್ದು, ಜೊತೆಗೆ ವನ್ಯ ಜೀವಿಗಳಿಂದ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರಲ್ಲಿ ಬರಬೇಕು. ಎಲ್ಲರೂ ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿಷ್ಠೆ ತೋರಬೇಕಿದೆ. ಹಾಗಿದ್ದರೆ ಮಾತ್ರ ಭವಿಷ್ಯದಲ್ಲಿ ಈ ಪ್ರಾಣಿಗಳ ಸಂತತಿ ಬೆಳೆಯಲು ಸಾಧ್ಯವಿದೆ. ಕಾಡು, ಅಭಯಾರಣ್ಯಗಳನ್ನು ಉಳಿಸುವ ಮೂಲಕ, ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಪಣತೊಡಬೇಕಿದೆ.

ABOUT THE AUTHOR

...view details