ಬೆಳಗಾವಿ: ವೀರರಾಣಿ ಕಿತ್ತೂರು ಚೆನ್ನಮ್ಮನ ಬಲಗೈ ಬಂಟ ರಾಯಣ್ಣನ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಸಂಗೊಳ್ಳಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈನಿಕ ವಸತಿ ಶಾಲೆಯನ್ನು ಆದಷ್ಟು ಶೀಘ್ರವೇ ಉದ್ಘಾಟಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ದಿನದಂದೇ ರಾಯಣ್ಣ ಜನಿಸಿರುವುದು ಹೆಮ್ಮೆಯ ಸಂಗತಿ. ಅವರ ಇತಿಹಾಸವನ್ನು ಯುವಪೀಳಿಗೆಗೆ ಪರಿಚಯಿಸಲು ಶಿಕ್ಷಣ ಸಂಸ್ಥೆ ಆರಂಭಿಸಲಾಗುತ್ತಿದೆ. ರಾಯಣ್ಣನಂತಹ ಇನ್ನಷ್ಟು ಸೈನಿಕರನ್ನು ರೂಪಿಸುವ ಕೆಲಸವನ್ನು ಸೈನಿಕ ಶಾಲೆ ಮೂಲಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ - ಕಾರಜೋಳ ಪ್ರತಿಕ್ರಿಯೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ, ಬೆಳಗಾವಿ ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.
ಸಿದ್ದರಾಮಯ್ಯಗೆ ಸಿಎಂ ಆಗುವ ಆಸೆ:
2019ರ ಆರಂಭದಿಂದಲೂ ನಮ್ಮ ಸರ್ಕಾರ ಬೀಳುತ್ತೆ. ನಾನು ಸಿಎಂ ಆಗ್ತೀನಿ ಅಂತ ಸಿದ್ದರಾಮಯ್ಯ ಆಸೆ ಪಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನಮ್ಮ ಸರ್ಕಾರ ಬೆಳಗಾವಿಯನ್ನು ಕಡೆಗಣಿಸಲಿಕ್ಕೆ ಸಾಧ್ಯವಿಲ್ಲ. ಬೆಳಗಾವಿ ಪ್ರೆಸ್ಟೀಜಿಯಸ್ ಜಿಲ್ಲೆ. ಬೆಂಗಳೂರು ನಂತರದ ಸ್ಥಾನಮಾನ ಬೆಳಗಾವಿ ಜಿಲ್ಲೆಗಿದೆ. ನಮ್ಮ ವರಿಷ್ಠರು, ಸಿಎಂ ಎಲ್ಲರೂ ಸೇರಿ 30 ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಹೊಂದಾಣಿಕೆ, ಜಿಲ್ಲಾ ಹೊಂದಾಣಿಕೆ ಕಷ್ಟ ಸಾಧ್ಯವಾಗಿದೆ. ಮುಂದಿನ ದಿನಮಾನಗಳಲ್ಲಿ ಇದನ್ನು ಸರಿಪಡಿಸುವ ಸಾಧ್ಯತೆ ಇದೆ ಎಂದರು.
ಸಿದ್ದರಾಮಯ್ಯ ಭವಿಷ್ಯ ಸುಳ್ಳಾಗಿಲ್ವಾ?
ಬೊಮ್ಮಾಯಿ ಸರ್ಕಾರ ಶೀಘ್ರ ಪತನವಾಗುತ್ತೆ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಭವಿಷ್ಯ ಹೇಳೇ ಹೇಳ್ತಾರೆ. ಸಿದ್ದರಾಮಯ್ಯ ಭವಿಷ್ಯ ಸುಳ್ಳಾಗಿಲ್ವಾ? 2019ರಿಂದ ನಮ್ಮ ಸರ್ಕಾರ ಬೀಳುತ್ತೆ, ಸಿಎಂ ಆಗ್ತೀನಿ ಅಂತಾ ಸಿದ್ದರಾಮಯ್ಯ ಆಸೆ ಪಡ್ತಿದ್ದಾರೆ. ಸಿದ್ದರಾಮಯ್ಯಗೆ ನಾನು ಹೇಳಲು ಬಯಸುವುದಿಷ್ಟೇ- ನಮ್ಮ ಸರ್ಕಾರ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ಣಾವಧಿ ಅಧಿಕಾರ ನಡೆಯುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ಬರುತ್ತದೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಯತ್ನಾಳ್ ಆರೋಪ ಸತ್ಯಕ್ಕೆ ದೂರವಾದದ್ದು:
ಬೊಮ್ಮಾಯಿ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಆರೋಪ ಸತ್ಯಕ್ಕೆ ದೂರವಾದದ್ದು. ಸಿಎಂ ಬಸವರಾಜ ಬೊಮ್ಮಾಯಿ ಅತ್ಯಂತ ಚಾಣಾಕ್ಷ್ಯ ರಾಜಕಾರಣಿ. ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸುತ್ತಾರೆ. ಸಂಪುಟ ಸದಸ್ಯರ ಸಹಕಾರ ಪಡೆದು ಉತ್ತಮ ಆಡಳಿತ ಕೊಡ್ತಾರೆ ಎಂದರು.
ಸಿಎಂ ದೆಹಲಿ ಭೇಟಿ:
ಸಿಎಂ ಬಸವರಾಜ ಬೊಮ್ಮಾಯಿ ಪದೇ ಪದೇ ದೆಹಲಿ ಭೇಟಿ ಬಗ್ಗೆ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿರುವ ವಿಚಾರಕ್ಕೆ ಪ್ರತಿಕ್ರಿಯಿ, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಕೇಂದ್ರ ಸರ್ಕಾರದ ಸಹಾಯ, ನಮ್ಮ ಯೋಜನೆಗೆ ಅನುಮತಿ ಪಡೆಯಲು ಹೋಗಿರುತ್ತಾರೆ. ಕೇಂದ್ರ ಸರ್ಕಾರ ಸಹಾಯ ಸಹಕಾರ ಅಗತ್ಯ ಇರುತ್ತದೆ. ಮೂರು ಸಾರಿಯೂ ಹೋಗಬಹುದು ನೂರು ಸಾರಿಯೂ ಹೋಗಬಹುದು ಎಂದರು.
ನೆಹರು ಬಗ್ಗೆ ಸಿ.ಟಿ. ರವಿ ಹೇಳಿಕೆ, ವಾಜಪೇಯಿ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನಿಡಿದ್ದಾರೆ. ಸತ್ತ ಎಮ್ಮೆಗೆ ಶೇರ್ ತುಪ್ಪ ಎನ್ನುವ ಗಾದೆ ಇದೆ. ಆ ಎಮ್ಮೆ ಕಡಿಮೆ ಹಿಂಡುತಿತ್ತೋ, ಹೆಚ್ಚು ಹಿಂಡತಿತ್ತೋ ಗೊತ್ತಿಲ್ಲ. ಆದ್ರೆ, ಆ ಎಮ್ಮೆ ಸತ್ತ ಮೇಲೆ ನಾವು ಎಮ್ಮೆ ಪ್ರತಿ ದಿನ ಶೇರ್ ತುಪ್ಪ ಕೊಡ್ತಿತ್ತು ಅಂತಾ ಹೇಳ್ತೀವಿ. ಇದರ ಅರ್ಥ ನಾವು ಯಾರನ್ನೂ ಕಡೆಗಣಿಸಿ ಮಾತನಾಡಬಾರದು. ಇವತ್ತು ವಾಜಪೇಯಿಯೂ ನಮ್ಮ ಮುಂದೆ ಇಲ್ಲ, ನೆಹರೂ ಅವರು ನಮ್ಮ ಮುಂದೆ ಇಲ್ಲ. ಅವರ ಜೀವಿತಾವಧಿಯಲ್ಲಿ ಅನೇಕ ಒಳ್ಳೆಯ ಕೆಲಸ ಕಾರ್ಯ ಮಾಡಿದ್ದಾರೆ. ಒಳ್ಳೆಯ ಕೆಲಸ ಕಾರ್ಯಗಳು ನಮ್ಮಿಂದ ಆಗುತ್ತೆ, ಕೆಟ್ಟ ಕೆಲಸ ಕಾರ್ಯಗಳು ನಮ್ಮಿಂದ ಆಗ್ತಾವೆ. ಅವರು ಸತ್ತ ಬಳಿಕ ಮಾಡಿರುವ ಒಳ್ಳೆಯ ಗುಣಗಳನ್ನು ಕೊಂಡಾಡಬೇಕು. ಅವರ ಬಗ್ಗೆ ಅವಹೇಳನ ಮಾಡುವುದು ಸರಿ ಅಲ್ಲ. ನಮ್ಮ ದೇಶದ ಇತಿಹಾಸ ಸಂಸ್ಕಾರ ಅರ್ಥ ಮಾಡಿಕೊಂಡವರು ನಮ್ಮ ಜೊತೆ ಇಲ್ಲದವರ ಬಗ್ಗೆ ಇಲ್ಲ ಸಲ್ಲದ ಮಾತನಾಡೋದು ನಮ್ಮ ಸಂಸ್ಕೃತಿ ಅಲ್ಲ. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿ ಇರುವಂತಹವರು. ನಮ್ಮಿಂದ ಒಳ್ಳೆಯ ಕೆಲಸ ಕಾರ್ಯ ಆಗಿರುತ್ತದೆ. ಕೆಟ್ಟ ಕೆಲಸ ಕಾರ್ಯವೂ ಆಗಿರುತ್ತವೆ. ನಾವು ನಮ್ಮ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ವಿನಂತಿಸುತ್ತೇನೆ ಎಂದರು.