ಬೆಳಗಾವಿ:ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ನನ್ನ ಸೋಲಿಗೆ ಸಹೋದರರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿಯೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಹಾಗೂ ಲಖನ್ ಲೋಕಸಭಾ ಉಪಚುನಾವಣೆಯಲ್ಲಿ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡಿದ್ದೇವೆ. ಸಿಂಗಲ್ ಅಭ್ಯರ್ಥಿ, ಸಿಂಗಲ್ ಮತ ಎಂದು ಕಾಂಗ್ರೆಸ್ನಿಂದ ಪ್ರಚಾರ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಲಖನ್ ಜಾರಕಿಹೊಳಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಡೌಟು. ಪಕ್ಷದ ವರಿಷ್ಠರು ಮುಂದೆ ಅವಕಾಶ ನೀಡುವ ಭರವಸೆ ನೀಡಿದರೆ ಲಖನ್ ನಾಮಪತ್ರ ಹಿಂಪಡೆಯಬಹುದು. ನಾವು ಲಖನ್ ಜಾರಕಿಹೊಳಿ ಜತೆಗೆ ಮಾತನಾಡುವ ಪ್ರಶ್ನೆಯೇ ಇಲ್ಲ ಎಂದರು.
ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ಕುಟಂಬದ ನಡುವಿನ ಫೈಟ್ ಇದಲ್ಲ. ನಾನು ಜಾರಕಿಹೊಳಿ ಕುಟುಂಬದ ಸದಸ್ಯ. ಆದರೂ ನಾನು ಕಾಂಗ್ರೆಸ್ ಕಡೆ ಇದ್ದೇನೆ. ಸಹೋದರರ ಸವಾಲು ರಾಜಕೀಯದಲ್ಲಿ ಇದ್ದೇ ಇರುತ್ತದೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡಿದ್ದಾರೆ. ಅವರ ಮಧ್ಯೆಯೇ ಸವಾಲಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಇದ್ದಾರೆ ಎಂದು ಹೇಳಿದರು.