ಬೆಳಗಾವಿ:ಧನುರ್ಮಾಸ ಮುಗಿದಿದ್ದು, ವಾರದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ. ಧನುರ್ಮಾಸ ಕಳೆದಿರುವುದರಿಂದ ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ವರಿಷ್ಠರ ಅಭಿಪ್ರಾಯ ಸಂಗ್ರಹಿಸಿಯೇ ಸಿಎಂ ಸಂಪುಟ ವಿಸ್ತರಿಸಲಿದ್ದಾರೆ. ತಮಗಿರುವ ಪರಮಾಧಿಕಾರ ಬಳಸಿ ಸಿಎಂ ಸಂಪುಟ ವಿಸ್ತರಿಸಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು, ಬಿಡಬೇಕು ಎಂಬುವುದನ್ನು ಸಿಎಂ ನಿರ್ಣಯಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯತ್ವ ನೀಡುವಂತೆ ಕೇಳಿರುವ ಆರ್.ಶಂಕರ್ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಸವದಿ, ಜೀವನದಲ್ಲಿ ಎಲ್ಲರಿಗೂ ಅಪೇಕ್ಷೆಗಳಿರುತ್ತವೆ. ಆರ್.ಶಂಕರ್ ಕೇಳುವುದು ತಪ್ಪಲ್ಲ. ಎಲ್ಲರಿಗೂ ಅಧಿಕಾರ, ಅಂತಸ್ತು, ಕಾರ್ಯ ಮಾಡಬೇಕೆಂಬ ಇಚ್ಛಾಶಕ್ತಿ ಇರುತ್ತದೆ. ಮಾಜಿ ಶಾಸಕ ಆರ್.ಶಂಕರ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಮೊದಲಿನಿಂದ ಪಕ್ಷದಲ್ಲಿದ್ದೇನೆ, ಮುಂದೆಯೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರು ರಾಜೀನಾಮೆ ಕೊಟ್ಟಿದ್ದಕ್ಕೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪಾಪ ಏನೋ ದುರದೃಷ್ಟ, ಇಬ್ಬರೂ ಸೋತಿದ್ದಾರೆ. ನಮಗೆ ಸ್ಥಾನಮಾನ ನೀಡಿ ಎಂದು ಅವರಿಬ್ಬರೂ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದರು.
ಕ್ಯಾಬಿನೆಟ್ ವಿಸ್ತರಣೆ ಆಗದಿದ್ದಕ್ಕೆ ಅಭಿವೃದ್ಧಿ ಕೆಲಸ ಆಗುತಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ ಸವದಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದು, ಆಡಳಿತ ಪಕ್ಷವನ್ನು ಟೀಕಿಸುವುದು ಅವರ ಕೆಲಸ. ತಮ್ಮ ಕರ್ತವ್ಯವನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ ಎಂದು ಕುಟುಕಿದರು. ಮಂಡ್ಯದಲ್ಲಿ ನಕಲಿ ಬೀಜ ವಿತರಣೆಯಿಂದ ರೈತರಿಗೆ ಹಾನಿ ಆಗಿರುವ ವಿಚಾರ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಸಾರಿಗೆ ಇಲಾಖೆಯಿಂದ ಹಳೇ ಬಸ್ ಓಡಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸವದಿ, ಈಗಾಗಲೇ 1200 ಬಸ್ ಖರೀದಿ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಬಸ್ ಬರಲಿದ್ದು, ಅವಶ್ಯಕತೆ ಇದ್ದ ಡಿಪೋಗಳಿಗೆ ಬಸ್‌ಗಳನ್ನು ಸರಬರಾಜು ಮಾಡಲಾಗುವುದು ಎಂದರು.