ಕರ್ನಾಟಕ

karnataka

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಹಿಂದೇಟು ಆರೋಪ..!

By

Published : Aug 14, 2020, 11:49 PM IST

ರಾಯಣ್ಣನ ಹುಟ್ಟೂರು ಸಂಗೊಳ್ಳಿ ಗ್ರಾಮದ 110 ಎಕರೆ ಭೂ ಪ್ರದೇಶದಲ್ಲಿ ನಡೆಯುತ್ತಿದ್ದ ಸೈನಿಕ ಶಾಲೆಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ತೆಗೆದಿಟ್ಟ ಅನುದಾನವನ್ನು ಮಂಜೂರು ಮಾಡದೇ ಬಿಜೆಪಿ ಸರ್ಕಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವಿಷಯದಲ್ಲಿ ಇಬ್ಬದಿಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

BJP government hesitates to build sangolli  rayanna military school ..!
ಸಂಗೊಳ್ಳಿ ರಾಯಣ್ಣನ ಸೈನಿಕ ಶಾಲೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಹಿಂದೇಟು ಆರೋಪ..!

ಬೈಲಹೊಂಗಲ (ಬೆಳಗಾವಿ): ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಗ್ರಾಮದ 110 ಎಕರೆ ಭೂ ಪ್ರದೇಶದಲ್ಲಿ 267.67 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದ ಸೈನಿಕ ಶಾಲೆಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಈಗಿನ ಬಿಜೆಪಿ ಸರ್ಕಾರ ಮೀಸಲಿದ್ದ ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಪರಿಣಾಮ ಸೈನಿಕ ಶಾಲೆಯ ಕಾಮಗಾರಿ ಗುತ್ತಿಗೆ ಪಡೆದಿದ್ದ ಶಿರ್ಕೆ ಕಂಪನಿ ಬೇರೊಂದು ಪ್ರೊಜೆಕ್ಟ್ ಕೆಲಸಕ್ಕಾಗಿ ಗಂಟುಮೂಟೆ ಕಟ್ಟುತ್ತಿದ್ದು, ಅರ್ಧಕ್ಕೆ ನಿಂತಿರೋ ಕಾಮಗಾರಿಯಿಂದ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ, ಸಂಗೊಳ್ಳಿ ಗ್ರಾಮದಲ್ಲಿ ಒಟ್ಟು 110 ಎಕರೆ ಭೂಪ್ರದೇಶವನ್ನು ರಾಯಣ್ಣನ ಸೈನಿಕ ಶಾಲೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಿ 267.67 ಕೋಟಿ ಅನುದಾನವನ್ನು ತೆಗೆದಿಡಲಾಗಿತ್ತು. ಆದ್ರೀಗ ತೆಗೆದಿಟ್ಟ ಅನುದಾನವನ್ನೇ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಮಂಜೂರು ಮಾಡದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವಿಷಯದಲ್ಲಿ ಇಬ್ಬದೀಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈಗಾಗಲೇ ಸಂಗೊಳ್ಳಿಯಲ್ಲಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ, ರಾಕ್ ಗಾರ್ಡನ್, ಕಲ್ಯಾಣಮಂಟಪ ಮತ್ತಿತರ ಕಾಮಗಾರಿಗಳು ಹಾಗೂ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಮ್ಯೂಸಿಯಂ (ವೀರಭೂಮಿ), ಯಾತ್ರಿನಿವಾಸ ನಿರ್ಮಾಣ, ರಾಯಣ್ಣ ಸ್ನಾನ ಮಾಡುತ್ತಿದ್ದ ಕೆರೆಯ ಜೀರ್ಣೋದ್ಧಾರ ಸೇರಿದಂತೆ ಒಟ್ಟಾರೆ 267.67 ಕೋಟಿ ರೂ. ವೆಚ್ಚದ ಕಾಮಗಾರಿ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ.

ಸಂಗೊಳ್ಳಿಯಲ್ಲಿ 125 ಕೋಟಿ ಹಾಗೂ ನಂದಗಡದಲ್ಲಿ 52 ಕೋಟಿಯ ಕಾಮಗಾರಿ ಪೂರ್ಣಗೊಂಡಿದ್ದು, ಸರ್ಕಾರ ಬಾಕಿ ಉಳಿಸಿಕೊಂಡಿರುವ 66 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ, ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ರಾಯಣ್ಣನ ಅಭಿಮಾನಿಗಳು ಮಾಡುತ್ತಿದ್ದಾರೆ.

ಕಸದಲ್ಲಿ ಮುಚ್ಚುತ್ತಿವೆ ಸ್ವಾತಂತ್ರ್ಯ ಹೋರಾಟಗಾರ ಮೂರ್ತಿಗಳು:10 ಎಕರೆ ಪ್ರದೇಶದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಾಲ್ಯ ಹಾಗೂ ಕಿತ್ತೂರು ಚನ್ನಮ್ಮರ ಜೀವನ ಘಟನೆಗಳನ್ನು ಸಾರುವ 700ಕ್ಕೂ ಹೆಚ್ಚಿನ ಮೂರ್ತಿಗಳನ್ನು ಉತ್ಸವ ರಾಕ್ ಗಾರ್ಡನ್ ವಿನ್ಯಾಸಕ ಟಿ.ಬಿ.ಸೋಲಬಕ್ಕನವರ ಕೈಕುಂಚದಲ್ಲಿ ನಿರ್ಮಿಸಲಾಗಿದೆ. ಆದರೆ, ಸರ್ಕಾರ ಅನುದಾನ ನೀಡದ ಹಿನ್ನೆಲೆಯಲ್ಲಿ, ಮೂರ್ತಿಗಳು ಕಸದಲ್ಲಿ ಮುಚ್ಚುತ್ತಿವೆ.

ABOUT THE AUTHOR

...view details