ಎಲ್ಲ ರೀತಿಯ ಪರೋಪಕಾರಗಳಲ್ಲಿ ದಾನವು ಶ್ರೇಷ್ಠವಾಗಿದೆ. ತನ್ನ ಎದೆ ಹಾಲನ್ನೇ ದಾನ ಮಾಡಿ ಸಾವಿರಾರು ಕಂದಮ್ಮಗಳ ಹೊಟ್ಟೆ ತುಂಬಿಸಿದ ಮಹಾತಾಯಿಯೊಬ್ಬಳು ಎಲ್ಲರ ಮನದಲ್ಲೂ ದೊಡ್ಡ ಸ್ಥಾನ ಗಳಿಸಿದ್ದಾರೆ. ಇವರ ಹೆಸರು ಶ್ರೀವಿದ್ಯಾ. ಈ ಮಹಾತಾಯಿ ತಮಿಳುನಾಡಿನವರು. ತನ್ನಂಥ ಎಲ್ಲ ತಾಯಂದಿರಿಗೂ ಈಕೆ ಸ್ಫೂರ್ತಿಯಾಗಿದ್ದಾರೆ. ಮೊದಲ ಹೆರಿಗೆಯ ನಂತರ ತನ್ನ ಮಗುವಿಗೆ ಕುಡಿಸಿ ಉಳಿದ ಎದೆಹಾಲನ್ನು ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಶ್ರೀವಿದ್ಯಾ ಬಯಸಿದ್ದರು. ಪತಿ ಭೈರವನಿಗೂ ತನ್ನ ವಿಚಾರ ತಿಳಿಸಿದರು.
ಆದರೆ, ಕೊನೆಗೆ ಆರೋಗ್ಯದ ಸಮಸ್ಯೆಯಿಂದಾಗಿ ಆಕೆಗೆ ತನ್ನ ಎದೆ ಹಾಲನ್ನು ದಾನ ಮಾಡಲು ಸಾಧ್ಯವಾಗಲಿಲ್ಲ. ಕೊಯಮತ್ತೂರಿನ 27 ವರ್ಷದ ಶ್ರೀವಿದ್ಯಾ ಕಳೆದ ವರ್ಷ ಎರಡನೇ ಬಾರಿಗೆ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ಐದನೇ ದಿನದಿಂದಲೇ ಆಕೆ ತನ್ನ ಎದೆ ಹಾಲನ್ನು ದಾನ ಮಾಡಲು ಪ್ರಾರಂಭಿಸಿದರು. ಮಹಾದಾನಿ ಶ್ರೀವಿದ್ಯಾ ತನ್ನ ಯೋಜನೆಯ ಬಗ್ಗೆ ಮಾತನಾಡಿದ್ದು, ಅವರ ವಿಚಾರಗಳನ್ನು ಅವರ ಮಾತಿನಲ್ಲೇ ಇಲ್ಲಿ ನೀಡಲಾಗಿದೆ.
’ಅಮೃತಂ ಸ್ತನ ಹಾಲು ದಾನ ಶಿಬಿರ’: "ನಾವು ಹಾಲಿನ ಸಂಗ್ರಹಣೆ ಮತ್ತು ವಿತರಣಾ ವಿಧಾನಗಳ ಬಗ್ಗೆ ಕಲಿತಿದ್ದೇವೆ. 'ಅಮೃತಂ ಸ್ತನ ಹಾಲು ದಾನ ಶಿಬಿರ' ಎಂಬ ಎನ್‌ಜಿಒ ತಿರುಪ್ಪೂರ್ ಬಳಿ ಎದೆಹಾಲು ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಅಲ್ಲಿನ ಮ್ಯಾನೇಜಮೆಂಟ್ ಸಿಬ್ಬಂದಿಯನ್ನು ಭೇಟಿ ಮಾಡಿ ನನ್ನ ವಿಚಾರವನ್ನು ಹೇಳಿದೆ. ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ನನಗೆ ಮಗು ಹುಟ್ಟಿದ ಒಂದು ವಾರದಲ್ಲಿ ಹಾಲು ಸಂಗ್ರಹಿಸಿ ನೀಡಲು ಪ್ರಾರಂಭಿಸಿದೆ."
ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಲಿನ ಬ್ಯಾಂಕ್:''ಆ ಬಳಿಕ ಅವರು ಕೊಯಮತ್ತೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಲಿನ ಬ್ಯಾಂಕ್‌ಗೆ ಹಾಲು ಕಳುಹಿಸುತ್ತಿದ್ದಾರೆ. ಕಡಿಮೆ ತೂಕ ಹೊಂದಿದ ನವಜಾತ ಶಿಶುಗಳು, ತಾಯಂದಿರಿಗೆ ಸಾಕಷ್ಟು ಹಾಲು ಬರದ ಶಿಶುಗಳು ಮತ್ತು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ಶಿಶುಗಳ ಹಸಿವನ್ನು ನೀಗಿಸುವ ಪ್ರಯತ್ನ ಮಾಡಿದ ನನಗೆ ತುಂಬಾ ಸಂತೋಷವಾಯಿತು. ನನ್ನ ಮಗು ಮತ್ತು ನನ್ನ ಮಕ್ಕಳಂತೆ ಇತರ ಶಿಶುಗಳ ಹಸಿವನ್ನು ನೀಗಿಸುವುದು ತೃಪ್ತಿ ತಂದಿದೆ.'' ಅಂತಾರೆ ಶ್ರೀ ವಿದ್ಯಾ
105 ಲೀಟರ್ ಹಾಲು ದಾನ:''ಕೋವೈ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಹೆರಿಗೆಗಳಾಗುತ್ತವೆ. ಇವುಗಳಲ್ಲಿ ಕೆಲ ನವಜಾತ ಶಿಶುಗಳನ್ನು ಹುಟ್ಟಿದ ತಕ್ಷಣ ಇನ್ಕ್ಯುಬೇಟರ್‌ಗಳಲ್ಲಿ ಇರಿಸಬೇಕಾಗುತ್ತದೆ. ಅಂತಹ ಮಕ್ಕಳಿಗೆ ನನ್ನ ಹಾಲನ್ನು ಹಂಚುತ್ತಿದ್ದರು. ಹಾಗಾಗಿ ಏಳು ತಿಂಗಳ ಕಾಲ ನಿರಂತರವಾಗಿ 105 ಲೀಟರ್ ಹಾಲನ್ನು ದಾನ ಮಾಡಲು ಸಾಧ್ಯವಾಯಿತು. ಈಗ ನಮ್ಮ ಮಗುವಿಗೆ ಹತ್ತು ತಿಂಗಳು. ನಾನು ನೀಡಿದ ಹಾಲು ಸುಮಾರು 2,500 ಶಿಶುಗಳ ಹಸಿವನ್ನು ನೀಗಿಸಿದೆ. ಅದರಲ್ಲೂ ಕಡಿಮೆ ತೂಕದೊಂದಿಗೆ ಜನಿಸಿದ ಮಕ್ಕಳಿಗೆ ನನ್ನ ಹಾಲು ಉಪಯುಕ್ತವಾಗಿದೆ." ಎಂದು ಶ್ರೀ ವಿದ್ಯಾ ಹೇಳಿದ್ದಾರೆ.
’’ಒಬ್ಬ ತಾಯಿ ಕಷ್ಟ ಇನ್ನೊಬ್ಬ ತಾಯಿಗಷ್ಟೇ ಗೊತ್ತು’’:ಮಗುವಿಗೆ ಹಾಲುಣಿಸಲು ಸಾಧ್ಯವಾಗದ ತಾಯಿಯ ಸಂಕಟ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಹಸಿವಿನಿಂದ ಕಂಗೆಟ್ಟ ಮಗುವಿನ ಹಸಿವು ನೀಗಿಸುವ ಅವಕಾಶ ಈ ಸೃಷ್ಟಿಯಲ್ಲಿ ಮತ್ತೊಬ್ಬ ತಾಯಿಗಿದೆ. ಎಲ್ಲ ತಾಯಂದಿರು ಈ ಬಗ್ಗೆ ತಿಳಿದಿರಬೇಕು. ಹಾಲು ದೇಣಿಗೆ ನೀಡಲು ಎಲ್ಲರೂ ಮುಂದೆ ಬರಬೇಕು. ‘‘ಏಳು ತಿಂಗಳಲ್ಲಿ 105 ಲೀಟರ್ ಹಾಲು ದಾನ ಮಾಡಿ ಪ್ರಶಸ್ತಿ ಪಡೆದಿದ್ದಕ್ಕಿಂತ, ಸಾವಿರಾರು ಮಕ್ಕಳ ಹಸಿವು ನೀಗಿಸಲು ಸಾಧ್ಯವಾಯಿತು ಎಂಬ ಹೆಮ್ಮೆ ಮತ್ತು ಸಂತೃಪ್ತಿ ನನಗಿದೆ" ಎನ್ನುವ ಶ್ರೀವಿದ್ಯಾ ಎಲ್ಲ ತಾಯಂದಿರಿಗೂ ಸ್ಪೂರ್ತಿಯಾಗಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎದೆಹಾಲು ವಂಚಿತ ಮಕ್ಕಳಿಗಾಗಿ ಮಿಲ್ಕ್ ಬ್ಯಾಂಕ್ ಆರಂಭ