ನವದೆಹಲಿ:ರೋಜಗಾರ್ ಮೇಳದ ಅಂಗವಾಗಿಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಅರ್ಹ 51,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ರೋಜ್‌ಗರ್ ಮೇಳವನ್ನು ಆರಂಭಿಸಲಾಗಿತ್ತು. ಈ ಮೇಳದ ಅಂಗವಾಗಿ ಇದುವರೆಗೆ ಲಕ್ಷಾಂತರ ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ನೀಡಲಾಗಿದೆ. ಇಂದು 50,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ದೀಪಾವಳಿಗೆ ಇನ್ನು ಸಮಯವಿದೆ. ಆದರೆ, ನೇಮಕಾತಿ ಪತ್ರಗಳನ್ನು ಸ್ವೀಕರಿಸುವವರ ಕುಟುಂಬಗಳಿಗೆ ದೀಪಾವಳಿಗಿಂತ ಮೊದಲೇ ದೀಪದ ಹಬ್ಬದ ಸಂಭ್ರಮ ಮನೆ ಮಾಡುವಂತೆ ಮಾಡಿದೆ ಎಂದರು.
ದೇಶಾದ್ಯಂತ 37 ಸ್ಥಳಗಳಲ್ಲಿ ಈ ರೋಜ್‌ಗಾರ್ ಮೇಳ ನಡೆಯಿತು. ಈ ಮೇಳದ ಅಂಗವಾಗಿ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಎಲ್ಲ ನೇಮಕಾತಿಗಳು ನಡೆದವು. ದೇಶದಾದ್ಯಂತ ಆಯ್ಕೆಯಾದ ಹೊಸ ಅಭ್ಯರ್ಥಿಗಳು ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಗೃಹ ಸಚಿವಾಲಯ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಸರ್ಕಾರದ ಸೇವೆಗೆ ಸೇರ್ಪಡೆಯಾಗಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಗಳು ತಾವು ನೀಡಿದ ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದಲೇ ಈ ರೋಜ್‌ಗಾರ್ ಮೇಳವನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಮೇಳೆ ಬಹುತೇಕರಿಗೆ ಹೊಸ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಈಗಾಗಲೇ ದೇಶಾದ್ಯಂತ ಕಾಲಕಾಲಕ್ಕೆ ಈ ಮೇಳಗಳನ್ನು ಆಯೋಜನೆ ಮಾಡಿ, ಲಕ್ಷ ಲಕ್ಷ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಮಾಡಲಾಗುತ್ತಿದೆ. ಇದು ಇನ್ಮುಂದೆಯೂ ಮುಂದುವರೆಯಲಿದೆ. ಈ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗಲಿದೆ.
ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿ ಮಾಡುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ. ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸದಾಗಿ ಸೇರ್ಪಡೆಗೊಂಡವರು iGOT ಕರ್ಮಯೋಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮಾಡ್ಯೂಲ್ ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಪಡೆಯುತ್ತಿದ್ದಾರೆ, ಅಲ್ಲಿ 750 ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳನ್ನು ಅಪ್ಲೋಡ್ ಮಾಡಲಾಗಿದ್ದು, 'ಎಲ್ಲಿಯಾದರೂ ಯಾವುದೇ ಸಾಧನ' ಕಲಿಕೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. (ANI)
ಇದನ್ನು ಓದಿ:ಎಫ್ಡಿ ನಿಯಮದಲ್ಲಿ ಬದಲಾವಣೆ: ಆರ್ಬಿಐ ಹೊಸ ಅಧಿಸೂಚನೆಯಲ್ಲೇನಿದೆ?