ಮುಂಬೈ : ಸತತ ಎರಡು ದಿನಗಳ ಕಾಲ ಇಳಿಕೆಯಲ್ಲಿ ಕೊನೆಗೊಂಡ ನಂತರ ಭಾರತೀಯ ಈಕ್ವಿಟಿ ಸೂಚ್ಯಂಕಗಳು ಗುರುವಾರ ಏರಿಕೆಯಲ್ಲಿ ಮುಕ್ತಾಯಗೊಂಡವು. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 405.53 ಪಾಯಿಂಟ್ ಅಥವಾ ಶೇಕಡಾ 0.62 ರಷ್ಟು ಏರಿಕೆ ಕಂಡು 65,631.57 ಕ್ಕೆ ತಲುಪಿದೆ ಮತ್ತು ನಿಫ್ಟಿ 108.20 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಏರಿಕೆ ಕಂಡು 19,544.30 ಕ್ಕೆ ತಲುಪಿದೆ.
ನಿಫ್ಟಿಯಲ್ಲಿ ಬಜಾಜ್ ಆಟೋ, ಲಾರ್ಸನ್ ಆಂಡ್ ಟೂಬ್ರೊ, ಟೈಟಾನ್ ಕಂಪನಿ, ಎಂ & ಎಂ ಮತ್ತು ಟಿಸಿಎಸ್ ಹೆಚ್ಚು ಲಾಭ ಗಳಿಸಿದವು. ಪವರ್ ಗ್ರಿಡ್ ಕಾರ್ಪೊರೇಷನ್, ಹಿಂಡಾಲ್ಕೊ ಇಂಡಸ್ಟ್ರೀಸ್, ಸಿಪ್ಲಾ, ಎನ್ಟಿಪಿಸಿ ಮತ್ತು ನೆಸ್ಲೆ ಇಂಡಿಯಾ ನಷ್ಟ ಅನುಭವಿಸಿದವು. ಆಟೋ, ಬ್ಯಾಂಕ್, ಮಾಹಿತಿ ತಂತ್ರಜ್ಞಾನ ಮತ್ತು ಬಂಡವಾಳ ಸರಕುಗಳು ಶೇಕಡಾ 0.5-1 ರಷ್ಟು ಏರಿಕೆ ಕಂಡರೆ, ಫಾರ್ಮಾ, ವಿದ್ಯುತ್ ಮತ್ತು ಪಿಎಸ್ಯು ಬ್ಯಾಂಕಿಂಗ್ ಷೇರುಗಳಲ್ಲಿ ಹೆಚ್ಚಿನ ಮಾರಾಟ ಕಂಡು ಬಂದಿತು.
ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಫ್ಲಾಟ್ ಆಗಿ ಕೊನೆಗೊಂಡರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇಕಡಾ 0.6 ರಷ್ಟು ಏರಿಕೆಯಾಗಿದೆ. ಸುಮಾರು 2178 ಷೇರುಗಳು ಏರಿಕೆಯಾದರೆ, 1361 ಷೇರುಗಳು ಕುಸಿದವು. 121 ಷೇರುಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಮತ್ತೊಂದೆಡೆ, ಭಾರತೀಯ ರೂಪಾಯಿ ಬುಧವಾರದ ಮುಕ್ತಾಯದ 83.23 ಕ್ಕೆ ಹೋಲಿಸಿದರೆ ಗುರುವಾರ ಪ್ರತಿ ಡಾಲರ್ಗೆ 83.25 ರಲ್ಲಿ ಕೊನೆಗೊಂಡಿತು. ರೂಪಾಯಿ ಗುರುವಾರ ಪ್ರತಿ ಡಾಲರ್ಗೆ 83.21 ರಲ್ಲಿ ಆರಂಭವಾಗಿತ್ತು.