ನವದೆಹಲಿ: ಭಾರತದ ಉತ್ಪಾದನಾ ವಲಯವು ಮೇ ತಿಂಗಳಲ್ಲಿ ಉತ್ತೇಜಕ ಬೆಳವಣಿಗೆಯನ್ನು ಪ್ರದರ್ಶಿಸಿದ್ದು, ಉದ್ಯಮಕ್ಕೆ ಸಕಾರಾತ್ಮಕ ಸಂಕೇತಗಳನ್ನು ನೀಡಿದೆ. ಎಸ್ & ಪಿ ಗ್ಲೋಬಲ್‌ನ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕದ ಪ್ರಕಾರ, ಸೂಚ್ಯಂಕವು ಏಪ್ರಿಲ್‌ನಲ್ಲಿ 57.2 ಇದ್ದದ್ದು ಮೇ ನಲ್ಲಿ 58.7 ಕ್ಕೆ ಏರಿಕೆಯಾಗಿದೆ. ಇದು ಅಕ್ಟೋಬರ್ 2020 ರಿಂದ ವಲಯದ ಬೆಳವಣಿಗೆಯಲ್ಲಿ ಅತ್ಯಂತ ದೃಢವಾದ ಸುಧಾರಣೆಯಾಗಿದೆ. ಇದು 31 ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ.
ಈ ಮೇನಲ್ಲಿ ಕಾರ್ಖಾನೆ ಆರ್ಡರ್‌ಗಳು ಹೆಚ್ಚಾಗಿವೆ. ಇದು ಸತತವಾಗಿ 23ನೇ ತಿಂಗಳಿಗೆ ಹೆಚ್ಚಾಗಿದೆ. ಅಲ್ಲದೆ ಇದು 2021ರ ಜನವರಿಯಿಂದ ಅತ್ಯಧಿಕ ಹೆಚ್ಚಳವಾಗಿದೆ. ರಫ್ತುಗಳು ಮೇ ತಿಂಗಳಲ್ಲಿ ಒಟ್ಟು ಹೊಸ ಆರ್ಡರ್‌ಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿವೆ ಮತ್ತು ಕಂಪನಿಗಳು ಆರು ತಿಂಗಳ ಕಾಲ ಅಂತರರಾಷ್ಟ್ರೀಯ ಮಾರಾಟದಲ್ಲಿ ತ್ವರಿತ ವಿಸ್ತರಣೆಯನ್ನು ದಾಖಲಿಸಿವೆ.
ಭಾರತದಲ್ಲಿ ತಯಾರಾದ ವಸ್ತುಗಳಿಗೆ ದೇಶದಲ್ಲಿ ಹಾಗೂ ವಿದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಪಿಎಂಐ ಬಿಂಬಿಸುತ್ತದೆ. ದೇಶದಲ್ಲಿನ ಬೇಡಿಕೆ ಹೆಚ್ಚಳವು ದೇಶದ ಆರ್ಥಿಕತೆಯ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎನ್ನುತ್ತಾರೆ ಪೊಲ್ಲಿಯಾನಾ ಡೆ ಲಿಮಾ. ಇವರು ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಸಂಸ್ಥೆಯ ಎಕನಾಮಿಕ್ಸ್ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದಾರೆ.
ಉತ್ಪಾದನಾ ಉದ್ಯಮವು ಹೆಸರೇ ಸೂಚಿಸುವಂತೆ ಕಚ್ಚಾ ವಸ್ತುಗಳು ಅಥವಾ ಅಗತ್ಯ ಭಾಗಗಳಿಂದ ಸಿದ್ಧಪಡಿಸಿದ ಹೊಸ ಉತ್ಪನ್ನಗಳ ತಯಾರಿಕೆಯ ಉದ್ಯಮವಾಗಿದೆ. ಇದು ಕಚ್ಚಾ ವಸ್ತುಗಳು ಅಥವಾ ಅಪೂರ್ಣ ಉತ್ಪನ್ನಗಳನ್ನು ಹೊಸ ಸಿದ್ಧಪಡಿಸಿದ ಉತ್ಪನ್ನಗಳಾಗಿ ಪರಿವರ್ತಿಸುವ ಈ ಪ್ರಕ್ರಿಯೆಯು ಭೌತಿಕ, ರಾಸಾಯನಿಕ ಅಥವಾ ಯಾಂತ್ರಿಕ ರೂಪಾಂತರಗಳನ್ನು ಒಳಗೊಂಡಿರುತ್ತದೆ.