ನವದೆಹಲಿ:ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಬೈಜೂಸ್ನ ಮುಖ್ಯ ಹಣಕಾಸು ಅಧಿಕಾರಿ (Chief Financial Officer- CFO) ಅಜಯ್ ಗೋಯಲ್ ರಾಜೀನಾಮೆ ನೀಡಿದ್ದಾರೆ. 2022 ರ ಹಣಕಾಸು ವರ್ಷದ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರು ರಾಜೀನಾಮೆ ನೀಡಿದ್ದು, ಮತ್ತೆ ವೇದಾಂತಾ ಕಂಪನಿಗೆ ಮರಳಲಿದ್ದಾರೆ ಎಂದು ಬೈಜೂಸ್ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯಮದ ಅನುಭವಿ ಪ್ರದೀಪ್ ಕಣಕಿಯಾ ಅವರನ್ನು ಬೈಜೂಸ್ ತನ್ನ ಹಿರಿಯ ಸಲಹೆಗಾರರಾಗಿ ನೇಮಿಸಿದ್ದು, ಅಧ್ಯಕ್ಷ (ಹಣಕಾಸು) ನಿತಿನ್ ಗೋಲಾನಿ ಅವರಿಗೆ ಕಂಪನಿಯ ಹಣಕಾಸು ಕಾರ್ಯವನ್ನು ನಿರ್ವಹಿಸಲು ಭಾರತದ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.
"ಮೂರು ತಿಂಗಳಲ್ಲಿ ಹಣಕಾಸು ವರ್ಷ 2022 ರ ಲೆಕ್ಕಪರಿಶೋಧನೆಯನ್ನು ಮುಗಿಸಲು ನನಗೆ ಸಹಾಯ ಮಾಡಿದ ಬೈಜೂಸ್ನ ಸ್ಥಾಪಕರು ಮತ್ತು ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬೈಜೂಸ್ನಲ್ಲಿ ಅಲ್ಪಾವಧಿಯ ಆದರೆ ಪರಿಣಾಮಕಾರಿ ಅವಧಿಯಲ್ಲಿ ನನಗೆ ಸಿಕ್ಕ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ" ಎಂದು ಗೋಯೆಲ್ ಹೇಳಿದರು. ಹಣಕಾಸು ವರ್ಷ 2022 ಲೆಕ್ಕಪರಿಶೋಧನೆಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಅವರು ಕಂಪನಿಯಿಂದ ಹೊರನಡೆಯಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಣಕಾಸು ವರ್ಷ 2022 ರ ತನ್ನ ದೀರ್ಘಕಾಲದ ಬಾಕಿ ಇರುವ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲು ಕಂಪನಿಯು ಕೆಲ ಅನುಮೋದನೆಗಳಿಗಾಗಿ ಕಾಯುತ್ತಿದೆ.