ಮುಂಬೈ: ಆರ್ಥಿಕ ಸ್ಥಿತಿ ಹದಗೆಟ್ಟು ಠೇವಣಿ ಹಿಂದಿರುಗಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿರುವ ಮುಂಬೈನ ಸಿಕೆಪಿ ಕೊ-ಆಪರೇಟಿವ್ ಬ್ಯಾಂಕ್‌ನ ಲೈಸನ್ಸ್ ರದ್ದು ಮಾಡಿದ ಬಳಿಕ ಗ್ರಾಹಕರ ಹಿತರಕ್ಷಣೆಯ ಭರವಸೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೀಡಿದೆ.
ಸಿಕೆಪಿ ಕೋ-ಆಪ್ ಬ್ಯಾಂಕಿನ 1.32 ಲಕ್ಷ ಠೇವಣಿದಾರರಲ್ಲಿ ಶೇ 99ರಷ್ಟು ಜನ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಜಿಸಿ) ಮೂಲಕ ಪೂರ್ಣ ಹಣ ಪಡೆಯುತ್ತಾರೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಬ್ಯಾಂಕ್‌ನ 1,32,170 ಠೇವಣಿದಾರರಲ್ಲಿ ಶೇ 99.2ರಷ್ಟು ಜನರು ತಮ್ಮ ಠೇವಣಿಗಳ ಸಂಪೂರ್ಣ ಪಾವತಿಯನ್ನು ಡಿಐಜಿಸಿಯಿಂದ ಪಡೆಯುತ್ತಾರೆ ಎಂದು ಆರ್‌ಬಿಐನ ಸಂವಹನ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಯೋಗೇಶ್ ದಯಾಳ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕನಿಷ್ಠ ಬಂಡವಾಳ ಪ್ರಮಾಣ ಶೇ 9ರಷ್ಟನ್ನು ಕಾಯ್ದುಕೊಳ್ಳುವಲ್ಲಿ ಬ್ಯಾಂಕ್ ವಿಫಲವಾಗಿದ್ದು, ಏಪ್ರಿಲ್ 30ರಿಂದ ಅನ್ವಯಿಸುವಂತೆ ಲೈಸೆನ್ಸ್ ರದ್ದುಪಡಿಸಲಾಗಿತ್ತು. ಇದರಿಂದಾಗಿ ಠೇವಣಿ ಸ್ವೀಕರಿಸುವುದು, ನೀಡುವುದನ್ನೂ ಒಳಗೊಂಡಂತೆ ಯಾವುದೇ ರೀತಿಯ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವಂತಿಲ್ಲ. ಠೇವಣಿದಾರರ ಹಣ ಮರಳಿಸುವ ಪ್ರಕ್ರಿಯೆ ಇನ್ನಷ್ಟೆ ಆರಂಭಿಸಬೇಕಾಗಿದೆ.