ನವದೆಹಲಿ:ಗಡಿಯಲ್ಲಿ ಭಾರತದ ವಿರುದ್ಧ ತಿರುಗಿ ಬಿದ್ದ ಚೀನಾಗೆ ವ್ಯಾಪಾರ ಸಮರದ ಮುಖೇನ ಭಾರತ ಒಂದೊಂದೇ ಅಸ್ತ್ರ ಪ್ರಯೋಗಿಸುತ್ತಿದೆ. ಎರಡು ಬಾರಿ ಚೀನೀ ಆ್ಯಪ್ಗಳ ಮೇಲೆ ನಿಷೇಧ ವಿಧಿಸಿದ ಬಳಿಕ ಈಗ ಮತ್ತೊಂದು ವಾಣಿಜ್ಯಾಸ್ತ್ರ ಪ್ರಯೋಗಿಸಿದೆ.
ಚೀನಾದಿಂದ ಆಮದಾಗುವ ಆಟಿಕೆಗಳು, ಸ್ಟೀಲ್ ಬಾರ್, ಸ್ಟೀಲ್ ಟ್ಯೂಬ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಟೆಲಿಕಾಂ ಸಾಮಗ್ರಿಗಳು, ದೊಡ್ಡ ಗಾತ್ರದ ಯಂತ್ರೋಪಕರಣಗಳು, ಕಾಗದ, ರಬ್ಬರ್, ಗ್ಲಾಸ್ ಸೇರಿದಂತೆ ಸುಮಾರು 371 ವಸ್ತುಗಳನ್ನು ಗುಣಮಟ್ಟದಡಿ ನಿರ್ಬಂಧ ಹೇರುವ ಮೂಲಕ ಮತ್ತೊಂದು ತಿರುಗೇಟು ನೀಡಿದೆ.
ಗಡಿಯಲ್ಲಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿ ಭಾರತದ ಕೆಂಗಣ್ಣಿಗೆ ಗುರಿಯಾದ ಚೀನಾವನ್ನು ಕೇಂದ್ರ ಸರ್ಕಾರ ರಾಜತಾಂತ್ರಿಕ ಹಾಗೂ ವಾಣಿಜ್ಯ ಮಾರ್ಗಗಳ ಮೂಲಕ ಮಣಿಸಲು ದೃಢ ನಿರ್ಧಾರ ಕೈಗೊಂಡಂತಿದೆ. ಈ ಹಿಂದೆ ಕೂಡ ಭದ್ರತೆಯ ನಿಯಮ ಉಲ್ಲಂಘನೆ ಆರೋಪಡಿ ಚೀನಾ ಮೂಲದ 59 ಹಾಗೂ 47 ಆ್ಯಪ್ಗಳನ್ನು ನಿರ್ಬಂಧಿಸಿತ್ತು.
ಚೀನಾದಿಂದ ಆಮದಾಗುವ ಸುಮಾರು 371 ವಸ್ತುಗಳನ್ನು ಮುಂದಿನ ಮಾರ್ಚ್ ಒಳಗೆ ಭಾರತೀಯ ಗುಣಮಟ್ಟ ಮಾನದಂಡ ವ್ಯಾಪ್ತಿಗೆ ತರಲಾಗುತ್ತದೆ. ಕಳೆದ ವರ್ಷ ಈ ವಸ್ತುಗಳನ್ನು ವಾಣಿಜ್ಯ ಇಲಾಖೆ ಪಟ್ಟಿ ಮಾಡಿತ್ತು. ಇದೀಗ ವಸ್ತುಗಳ ಮೇಲೆ ಗುಣಮಟ್ಟ ನಿರ್ಬಂಧ ಹೇರಲಾಗುತ್ತದೆ.