ಕರ್ನಾಟಕ

karnataka

ETV Bharat / business

GST ಸ್ಲ್ಯಾಬ್​ ದರಗಳ ಇಳಿಕೆಗೆ ಕೊಕ್​? ವರ್ಷಾಂತ್ಯದಲ್ಲಿ ಜನಸಾಮಾನ್ಯರಿಗೆ ತೆರಿಗೆ ಬರೆ! - ಜಿಎಸ್​ಟಿ ಸಂಗ್ರಹ

ಕಳೆದ ವಾರ ಕೇಂದ್ರ ವಿತ್ತ ಸಚಿವಾಲಯ ಎಲ್ಲ ರಾಜ್ಯಗಳ ಜಿಎಸ್​ಟಿ ಆಯುಕ್ತರಿಗೆ ಪತ್ರ ಬರೆದು ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದೆ. ಏರಿಕೆಯಾಗುತ್ತಿರುವ ಆದಾಯ ತೆರಿಗೆ, ತೆರಿಗೆ ವಿನಾಯಿತಿ, ಜಿಎಸ್​​ಟಿ ಪರಿಹಾರ, ಸೆಸ್​ ದರ, ತೆರಿಗೆ ಪಾವತಿ, ರಾಜ್ಯಗಳಿಂದ ಸಂಗ್ರಹವಾಗುತ್ತಿರುವ ಜಿಎಸ್​ಟಿ ಪ್ರಮಾಣ, ಆದಾಯ ವೃದ್ಧಿ ಸೇರಿದಂತೆ ಇತರೆ ವಿಷಯಗಳು ಡಿಸೆಂಬರ್​ 18ರಂದು ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರಲಿವೆ.

GST
ಜಿಎಸ್​ಟಿ

By

Published : Dec 4, 2019, 6:40 PM IST

ನವದೆಹಲಿ: ಪ್ರಸಕ್ತ ಕ್ಯಾಲೆಂಡರ್​ ವರ್ಷದ ಕೊನೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ​ ಸಭೆಯು ಡಿಸೆಂಬರ್​ 18ರಂದು ನಡೆಯಲಿದ್ದು, ಈ ವೇಳೆ ಖಜಾನೆಯ ಆದಾಯ ಹೆಚ್ಚಿಸುವ ಮತ್ತು ಜಿಎಸ್​ಟಿ ರಚನೆ ಪರಿಶೀಲಿಸಿ ಸ್ಲ್ಯಾಬ್​ ದರಗಳ ಕಡಿತವನ್ನು ಕೈಬಿಡುವ ಸಾಧ್ಯತೆ ಇದೆ.

ಕಳೆದ ವಾರ ಕೇಂದ್ರ ವಿತ್ತ ಸಚಿವಾಲಯ ಎಲ್ಲ ರಾಜ್ಯಗಳ ಜಿಎಸ್​ಟಿ ಆಯುಕ್ತರಿಗೆ ಪತ್ರ ಬರೆದು ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದೆ. ಏರಿಕೆಯಾಗುತ್ತಿರುವ ಆದಾಯ ತೆರಿಗೆ, ತೆರಿಗೆ ವಿನಾಯಿತಿ, ಜಿಎಸ್​​ಟಿ ಪರಿಹಾರ, ಸೆಸ್​ ದರ, ತೆರಿಗೆ ಪಾವತಿ, ರಾಜ್ಯಗಳಿಂದ ಸಂಗ್ರಹವಾಗುತ್ತಿರುವ ಜಿಎಸ್​ಟಿ ಪ್ರಮಾಣ, ಆದಾಯ ವೃದ್ಧಿ ಸೇರಿದಂತೆ ಇತರೆ ವಿಷಯಗಳು ಈ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರಲಿವೆ.

ಹಲವು ಸಿದ್ಧಪಡಿಸಿದ ಉತ್ಪನ್ನಗಳ ಮೇಲಿನ ಜಿಎಸ್​ಟಿ ದರಗಳು ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ. ಆದಾಯ ಸಂಗ್ರಹವನ್ನು ಸರಿದೂಗಿಸಲು ಕೇಂದ್ರವು ಪ್ರಯತ್ನಿಸುತ್ತಿದೆ. ಆಮದು ಮತ್ತು ಕಚ್ಚಾ ವಸ್ತುಗಳಿಗಿಂತ ಸಿದ್ಧಪಡಿಸಿದ ಉತ್ಪನ್ನಗಳು ಹೆಚ್ಚು ವೃದ್ಧಿಯಾಗುತ್ತಿದ್ದು, ಕೇಂದ್ರ ಇದರ ಮೇಲೆ ತೆರಿಗೆ ಏರಿಕೆಗೆ ನಿರ್ಧರಿಸುವ ನಿರೀಕ್ಷೆ ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಬುಧವಾರ) ರಾಜ್ಯಗಳ ಹಣಕಾಸು ಸಚಿವರು ಹಾಗೂ ವಿರೋಧ ಪಕ್ಷದ ರಾಜ್ಯಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ, ಬಾಕಿ ಉಳಿಸಿಕೊಂಡ ಜಿಎಸ್​ಟಿ ಪರಿಹಾರ ವಿತರಣೆ ಹಾಗೂ ಆದಾಯ ಸಂಗ್ರಹದ ಬಗ್ಗೆ ಚರ್ಚಿಸಿದ್ದಾರೆ.

ಜಿಎಸ್​ಟಿ ರಚನೆಯಲ್ಲಿನ ವಿವಿಧ ಬದಲಾವಣೆಗಳಿಂದ ಕೆಲವು ಉತ್ಪನ್ನ ಹಾಗೂ ಸೇವೆಗಳ ಸ್ಲ್ಯಾಬ್ ದರವನ್ನು ಶೇ 25ರಿಂದ 18ಕ್ಕೆ ಇಳಿಸಲಾಗಿದೆ. ಆದಾಯ ಕಡಿತವಾದ ಈ ಅಂತರವನ್ನು ಹೇಗೆ ತುಂಬಬಹುದು ಎಂಬುದರ ಕುರಿತು ಕೇಂದ್ರವು ಸಮಾಲೋಚನೆ ನಡೆಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಪ್ರಮುಖ ಆರ್ಥಿಕ ಸಲಹಾ ಸಂಸ್ಥೆಯೊಂದರ ತೆರಿಗೆ ತಜ್ಞರು ಹೇಳಿದ್ದಾರೆ.

ಆರ್‌ಬಿಐನ ಇತ್ತೀಚಿನ ವರದಿಯ ಪ್ರಕಾರ, ಜಿಎಸ್‌ಟಿ ದರದ ಪರಿಣಾಮದಿಂದ ಪ್ರಸ್ತುತ ತೆರಿಗೆ ದರವು ಶೇ 11ರಷ್ಟು ಇಳಿಕೆ ಆಗಿದೆ. 2017ರ ಮೇ ತಿಂಗಳಲ್ಲಿ ಇದು ಶೇ 14ರಷ್ಟು ಇತ್ತು. ಸರ್ಕಾರಗಳ ವಾರ್ಷಿಕ ಆದಾಯ ಸುಮಾರು 2 ಲಕ್ಷ ಕೋಟಿ ರೂ. ಇಳಿಕೆಯಾಗಿದೆ. ಇದರರ್ಥ ರಾಜ್ಯಗಳ ಸಂಗ್ರಹ ಕುಸಿದಿದ್ದು, ಕೇಂದ್ರದಿಂದ ಬರುವ ಪರಿಹಾರದ ಮೇಲೆ ಅವುಗಳ ಅವಲಂಬನೆ ಹೆಚ್ಚಾಗಿದೆ. ಸಂಗ್ರಹಣೆಯ ಬೆಳವಣಿಗೆಯು ವರ್ಷಕ್ಕೆ ಶೇ 14ಕ್ಕಿಂತ ಕಡಿಮೆಯಿದ್ದರೆ ನಷ್ಟ ಪರಿಹಾರ ನೀಡುವುದಾಗಿ ಕೇಂದ್ರವು ರಾಜ್ಯಗಳಿಗೆ ಭರವಸೆ ನೀಡಿತ್ತು. ಇದನ್ನು ಈಗ ಕೇಂದ್ರ ಈಡೇರಿಸಬೇಕಿದೆ.

ABOUT THE AUTHOR

...view details