ಲಂಡನ್:ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಹಾಗೂ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅರ್ಜಿಯನ್ನು ಲಂಡನ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದೆ. ಭಾರತದ ನ್ಯಾಯ ವ್ಯವಸ್ಥೆ ನಿಷ್ಪಕ್ಷಪಾತವಾಗಿದೆ ಎಂದು ಲಂಡನ್ ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ವೆಸ್ಟಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಸ್ಯಾಮುಯೆಲ್ ಗೋಜಿ ನೀರವ್ ಪ್ರಕರಣದ ವಿಚಾರಣೆ ನಡೆಸಿ ಇದೀಗ ತೀರ್ಪು ಪ್ರಕಟಿಸಿದ್ದಾರೆ. ನೀರವ್ ಮೋದಿ ಭಾರತದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಆತ ಅಪರಾಧಿಯಾಗಿ ಘೋಷಿಸಲ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದು ನ್ಯಾಯಾಧೀಶರು ತೀರ್ಪು ನೀಡುವ ವೇಳೆ ಉಲ್ಲೇಖಿಸಿದ್ದಾರೆ.
ನೀರವ್ ಮೋದಿ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಮೇಲ್ನೋಟಕ್ಕೆ ಆತ ತಪ್ಪಿತಸ್ಥನೆಂದು ಕಂಡುಬರುತ್ತಿದೆ ಎಂದೂ ಕೋರ್ಟ್ ಹೇಳಿದೆ.
ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದಲ್ಲಿ ಆತನಿಗೆ ನ್ಯಾಯ ಸಿಗಲಾರದು ಎಂಬ ವಾದಗಳಲ್ಲಿ ಸತ್ಯವಿಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆ ನಿಷ್ಪಕ್ಷಪಾತವಾಗಿದೆ ಎಂದು ಕೋರ್ಟ್ ಹೇಳಿದ್ದು, ಮಾನಸಿಕ ಅಸ್ವಸ್ಥತೆಯ ಕಾರಣ ವಿನಾಯಿತಿ ನೀಡಬೇಕೆಂಬ ವಾದವನ್ನು ತಿರಸ್ಕರಿಸಿದೆ.
ಮೇಲ್ಮನವಿ ಅವಕಾಶ: ಸದ್ಯದ ಕೋರ್ಟ್ ತೀರ್ಪಿನಿಂದ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುವ ದಾರಿ ಸುಗಮವಾಗಿದೆಯಾದರೂ ಎಲ್ಲ ಅಡೆತಡೆಗಳು ಇನ್ನೂ ನಿವಾರಣೆಯಾಗಿಲ್ಲ. ನೀರವ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇನ್ನೂ ಲಭ್ಯವಿದೆ. ಈ ಆದೇಶ ಪ್ರಶ್ನಿಸಿ ನೀರವ್ ಹೈಕೋರ್ಟ್ ಮೊರೆ ಹೋಗಬಹುದಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಬಹುದು.