ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ದೋಚಿ ಪರಾರಿಯಾಗಿದ್ದ ಗ್ಯಾಂಗ್ ವಾಹನ ತಪಾಸಣೆ ಮಾಡುವಾಗ ಉಪ್ಪಾರಪೇಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶಿವಾಜಿನಗರದ ಸೈಯ್ಯದ್ ನಾಜೀಮ್, ಇಮ್ರಾನ್ ಷರೀಫ್ ಹಾಗೂ ಸಕ್ಲೇನ್ ಅಹಮದ್ ಬಂಧಿತರು. ಇವರಿಂದ ಸುಮಾರು 7 ಲಕ್ಷ ಬೆಲೆಯ ವಿವಿಧ ಕಂಪನಿಯ 8 ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
ಮೇ 20 ರಂದು ಮಂಜುನಾಥ್ ಎಂಬುವರು ಉಪ್ಪಾರಪೇಟೆ ಬಳಿಯ ತುಳಸಿ ಪಾರ್ಕ್ ಬಳಿ ಬೈಕ್ ಬಳಕೆ ಬಗ್ಗೆ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡುವಾಗ ಹೊಂಡಾ ಆಕ್ಟೀವಾದಲ್ಲಿ ಬಂದ ಖದೀಮರು ವಿಳಾಸ ಕೇಳುವ ನೆಪದಲ್ಲಿ ಮಂಜುನಾಥ್ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಏಕಾಏಕಿ ಚಾಕು ತೋರಿಸಿ ಹೆದರಿಸಿ 13 ಸಾವಿರ ಬೆಲೆಯ ರೆಡ್ ಮಿ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆಯ ಇನ್ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆಸುವಾಗ ಅನಗತ್ಯ ಸಂಚಾರ ನಡೆಸುತ್ತಿದ್ದ ಖದೀಮರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಸಮಂಜಸ ಉತ್ತರ ನೀಡಿಲ್ಲ. ಸೂಕ್ತ ದಾಖಲಾತಿ ಇಲ್ಲದಿರುವುದನ್ನು ಕಂಡು ಅನುಮಾನಗೊಂಡು ಠಾಣೆಗೆ ಕರೆದೊಯ್ದು ತ್ರೀವ ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಡಿ.ಜೆ.ಹಳ್ಳಿ, ಬೈಯ್ಯಪ್ಪನಹಳ್ಳಿ, ಬಂಡೆಪಾಳ್ಯ, ಶೇಷಾದ್ರಿಪುರಂ, ಭಾರತಿನಗರ, ಕಾಟನ್ ಪೇಟೆ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎಂಟು ಪ್ರಕರಣ ಪತ್ತೆಯಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.