ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತ ಮತ್ತು ಸುಧಾರಣೆಗಳು ತತ್ವಗಳಿಲ್ಲದ ರಾಜಕೀಯವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದವು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕರ್ಜುನ್ ಖರ್ಗೆ ಹೇಳಿದ್ದಾರೆ.
ರಾಜಕೀಯ ನಾಯಕರಾಗಿ ರಾಜೀವ್ ಗಾಂಧಿಯವರ ಜೀವನ ಪಯಣವನ್ನು ಮತ್ತು ಆ ವರ್ಷಗಳಲ್ಲಿ ಅವರ ಸರ್ಕಾರವು ಮಾಡಿದ ಕಾರ್ಯಗಳನ್ನು ಖರ್ಗೆ ಉಲ್ಲೇಖಿಸಿದ್ದಾರೆ. ಅದನ್ನು ಪ್ರಸ್ತುತ ಕೇಂದ್ರ ಸರ್ಕಾರದೊಂದಿಗೆ ಹೋಲಿಸಿದ್ದಾರೆ.
1991ರ ಮೇ 21ರಂದು ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಸಾವನ್ನಪ್ಪಿದ್ದರು. ಆದರೆ, ಆ ಕುರಿತ ತನಿಖೆ ಇಂದಿಗೂ ನಕಲಿ ತನಿಖೆಯಾಗಿ ಉಳಿದಿದೆ ಎಂದು ಆರೋಪಿಸಿದರು.
ತಮ್ಮ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಭಾರತವನ್ನು ತಮ್ಮ ಸರ್ಕಾರ ಮತ್ತು ಪಕ್ಷದೊಳಗಿನಿಂದ ಅಭಿವೃದ್ಧಿಪಡಿಸುವ ಅವರ ಪ್ರಯತ್ನಗಳನ್ನು ದುರ್ಬಲಗೊಳಿಸುವ ಒಂದು ಏಕೀಕೃತ ಪ್ರಯತ್ನ ನಡೆದಿತ್ತು. ಸರ್ಕಾರವು ಅವರಿಗೆ ನೀಡಿದ್ದ ಭದ್ರತೆ ಹಿಂತೆಗೆದುಕೊಂಡಿತು ಮತ್ತು ಇದು ಅವರ ಹತ್ಯೆಗೆ ಕಾರಣವಾಯಿತು" ಎಂದು ಹೇಳಿದರು.
"ಅವರ ಜೀವಿತಾವಧಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಯಿತು. ಅವರ ಪರಂಪರೆಯನ್ನು ನಿರಾಕರಿಸಲು 30 ವರ್ಷಗಳ ನಂತರವೂ ನಕಲಿ ತನಿಖೆ ಮುಂದುವರೆದಿದೆ" ಎಂದು ಅವರು ಹೇಳಿದರು.
ಇದರೊಂದಿಗೆ, ಭಗವಾನ್ ಬುದ್ಧನ ಮಾತನ್ನು ಖರ್ಗೆ ಉಲ್ಲೇಖಿಸಿ, "ಮೂರು ವಿಷಯಗಳನ್ನು ದೀರ್ಘಕಾಲ ಮರೆಮಾಚಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ" ಎಂದು ಹೇಳಿದ್ದಾರೆ.
"ರಾಜೀವ್ ಅವರ ಆಡಳಿತ ಮತ್ತು ಸುಧಾರಣೆಗಳು ಭಾರತದಲ್ಲಿ"ತತ್ತ್ವಗಳಿಲ್ಲದ ರಾಜಕೀಯ"ವನ್ನು ಕೊನೆಗೊಳಿಸುವ ಉದ್ದೇಶ ಹೊಂದಿತ್ತು. ಆದರೆ, ಇಂದು ಪರಿಸ್ಥಿತಿಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಏಕೆಂದರೆ, ಉನ್ನತ ಮಟ್ಟದಲ್ಲಿ ಯಾವುದೇ ತತ್ತ್ವಗಳಿಲ್ಲ" ಎಂದು ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು.
ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸಲು ಸರ್ಕಾರವು ಪಕ್ಷಾಂತರ ವಿರೋಧಿ ಕಾನೂನನ್ನು ದುರುಪಯೋಗಪಡಿಸುತ್ತಿದೆ ಎಂದು ಖರ್ಗೆ ಆರೋಪಿಸಿದರು.
"ಎಲ್ಲಾ ಅಧಿಕಾರಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳುವುದರಲ್ಲಿ ನಂಬಿಕೆ ಇಟ್ಟಿರುವ ಸರ್ಕಾರವಿದೆ ಮತ್ತು ತೆರಿಗೆ ಆದಾಯವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳಲು ಸಹ ನಿರಾಕರಿಸುತ್ತದೆ ಎಂದು ಅವರು ಆರೋಪಿಸಿದರು.