ಬೆಂಗಳೂರು:ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಗ್ರರು ತನ್ನ ಪೈಶಾಚಿಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎನ್ನುವ ಆತಂಕಕಾರಿ ವಿಷಯ ತಿಳಿದು ಬಂದಿದೆ.
ದಕ್ಷಿಣ ಭಾರತದಲ್ಲಿ ಉಗ್ರದಾಳಿಯ ಬಗ್ಗೆ ಎಚ್ಚರಿಸಿದ ಫೋನ್ ಕರೆ: ಪೊಲೀಸರಿಂದ ಕಟ್ಟೆಚ್ಚರ - ರಾಮನಾಥಪುರಂ
ಕರ್ನಾಟಕ, ತಮಿಳುನಾಡು, ಪುದುಚೇರಿ, ಗೋವಾ,ಕೇರಳ ಹಾಗೂ ಆಂಧ್ರ ಪ್ರದೇಶಗಳ ನಡುವೆ ಸಂಚರಿಸುವ ರೈಲಿನಲ್ಲಿ ಕೃತ್ಯ ನಡೆಸಲಿದ್ದಾರೆ ಎಂದು ತಮಿಳು ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಲಾರಿ ಡ್ರೈವರ್ ಎಚ್ಚರಿಕೆ ನೀಡಿದ್ದಾನೆ.
ತಮಿಳುನಾಡಿನ ರಾಮನಾಥಪುರಂಗೆ 19 ಮಂದಿ ಉಗ್ರರು ಒಳ ನುಗ್ಗಿದ್ದಾರೆ ಎಂದು ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಲಾರಿ ಚಾಲಕ ಸ್ವಾಮಿ ಸುಂದರಮೂರ್ತಿ ಎಂಬುವರು ಮಾಹಿತಿ ನೀಡಿದ್ದಾರೆ. ಸಂಜೆ 5.30ರ ವೇಳೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾನೆ. ಈತ ನೀಡಿದ ಪ್ರಕಾರ ಈಗಾಗಲೇ ರಾಮನಾಥಪುರಂಗೆ 19 ಮಂದಿ ಉಗ್ರರು ಪೈಶಾಚಿಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದಾರೆ. ಪ್ರಮುಖವಾಗಿ ಕರ್ನಾಟಕ, ತಮಿಳುನಾಡು, ಪುದುಚೇರಿ, ಗೋವಾ,ಕೇರಳ ಹಾಗೂ ಆಂಧ್ರ ಪ್ರದೇಶಗಳ ನಡುವೆ ಸಂಚರಿಸುವ ರೈಲಿನಲ್ಲಿ ಕೃತ್ಯ ನಡೆಸಲಿದ್ದಾರೆ ಎಂದು ತಮಿಳು ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಬಂದ ಬೆನ್ನಲೇ ಈಗಾಗಲೇ ದಕ್ಷಿಣ ಭಾಗದ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ, ದೆಹಲಿಯ ರೈಲ್ವೇ ಪೊಲೀಸ್ ಮುಖ್ಯಸ್ಥರಿಗೆ, ರಾಜ್ಯದ ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ, ನಗರ ಪೊಲೀಸ್ ಆಯುಕ್ತರು, ರಾಜ್ಯ ಗುಪ್ತಚರ ಇಲಾಖೆ ಹಾಗೂ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಿಗೆ ಡಿಜಿ ನೀಲಮಣಿ ಎನ್.ರಾಜು ಅವರು ಮಾಹಿತಿ ರವಾನಿಸಿದ್ದಾರೆ. ಪ್ರಮುಖವಾಗಿ ರಾಜ್ಯದ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಿದ್ದಾರೆ.