ಚಿಕ್ಕಮಗಳೂರು: ಕೆಲ ದಿನ ಬಿಡುವು ನೀಡಿದ್ದ ವರುಣ ಈಗ ಮತ್ತೆ ತನ್ನ ಆರ್ಭಟ ಶುರುವಿಟ್ಟಿದ್ದಾನೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ: ಶಾಲಾ-ಕಾಲೇಜುಗಳಿಗೆ ರಜೆ - holiday for moodigere schools
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ತಹಶೀಲ್ಡಾರ್ ರಮೇಶ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ, ಕಳಸ, ಕುದುರೆಮುಖ, ಶೃಂಗೇರಿ, ಕೊಪ್ಪ ಭಾಗದಲ್ಲಿ ನಿನ್ನೆ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ. ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಮಳೆ ನಿನ್ನೆ ರಾತ್ರಿಯಿಂದ ಬಿಡದಂತೆ ಸುರಿಯುತ್ತಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಕೆರೆಕಟ್ಟೆ, ಕೊಟ್ಟಿಗೆಹಾರ, ಚಾರ್ಮಾಡಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಈ ಭಾಗದ ಜೀವನದಿಯಾದ ಹೇಮಾವತಿ ನದಿಯ ಹರಿವು ಹೆಚ್ಚಾಗಿದೆ. ಇನ್ನು ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಮಲೆನಾಡು ಭಾಗವಾದ ಕೊಪ್ಪ, ಶೃಂಗೇರಿ, ಎನ್.ಆರ್ ಪುರ, ಕಳಸಾ, ಕುದುರೆಮುಖ ಭಾಗದಲ್ಲಿಯೂ ಸಾಧಾರಣ ಮಳೆಯಾಗುತ್ತಿದ್ದು, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇನ್ನು ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮೂಡಿಗೆರೆ ಭಾಗದಲ್ಲಿ ನಿರಂತರ ಮಳೆಯ ಕಾರಣ ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ತಹಶೀಲ್ಡಾರ್ ರಮೇಶ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಅರೆ ಮಲೆನಾಡು ಭಾಗವಾದ ಕಡೂರು, ತರೀಕೆರೆ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಮುನ್ಸೂಚನೆ ದಟ್ಟವಾಗಿ ಕಾಣುತ್ತಿದೆ. ನಿರಂತರ ಮಳೆಯ ಕಾರಣ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯವಾಗಿದೆ. ಮಲೆನಾಡಿನ ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿರುವ ಮಾಹಿತಿಯೂ ಲಭ್ಯವಾಗಿದೆ.