ಶಮ್ಲಿ(ಉತ್ತರ ಪ್ರದೇಶ):ವರದಿಗಾಗಿ ತೆರಳಿದ್ದ ಪತ್ರಕರ್ತನೊಬ್ಬನಿಗೆ ಮಾರಣಾಂತಿಕವಾಗಿ ಹೊಡೆದು, ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯಲ್ಲಿ ನಡೆದಿದೆ.
ಶಮ್ಲಿ ಸಮೀಪದ ಧಿಮಾನ್ಪುರದಲ್ಲಿ ರೈಲೊಂದು ಹಳಿತಪ್ಪಿತ್ತು. ಇದರ ವರದಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತನೊಬ್ಬ ತೆರಳಿದ್ದ. ಜನಸಾಮಾನ್ಯರ ಉಡುಪಿನಲ್ಲಿದ್ದ ರೈಲ್ವೇ ಪೊಲೀಸರು ಕ್ಯಾಮರಾ ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.
"ಮೊದಲಿಗೆ ಓರ್ವ ಪೊಲೀಸ್ ಹೊಡೆದಿದ್ದಾನೆ. ಈ ವೇಳೆ ನನ್ನ ಬಳಿಯಿದ್ದ ಕ್ಯಾಮರಾ ನೆಲಕ್ಕೆ ಬಿತ್ತು. ಇದನ್ನು ತೆಗೆಯಲೆತ್ನಿಸಿದ ಸಂದರ್ಭದಲ್ಲಿ ಎಲ್ಲರೂ ಹೊಡೆಯಲು ಶುರು ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲರೂ ಸೇರಿ ನನ್ನನ್ನು ಸುತ್ತುವರಿದರು. ನನ್ನ ಬಟ್ಟೆಯನ್ನು ಹರಿದು, ಬಾಯಿಯನ್ನು ಬಲವಂತವಾಗಿ ತೆರೆದು ಮೂತ್ರ ಮಾಡಿದರು" ಎಂದು ಪತ್ರಕರ್ತ ಘಟನೆಯನ್ನು ವಿವರಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೇ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಕುಮಾರ್, ಕಾನ್ಸ್ಟೇಬಲ್ ಸುನಿಲ್ ಕುಮಾರ್ ಅವರನ್ನು ಸದ್ಯ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.