ಜಕಾರ್ತಾ: ಭಾರತದಲ್ಲಿ ನಾಳೆ ಸಾರ್ವತ್ರಿಕ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಇವಿಎಂ ಮಷಿನ್ ಸರಿಯಿಲ್ಲ, ಆಯೋಗ ಸರಿಯಾಗಿ ಕೆಲ್ಸ ಮಾಡ್ತಿಲ್ಲ ಎಂಬೆಲ್ಲಾ ಆರೋಪಗಳು ಕೇಳಿಬರ್ತಿವೆ. ಭಾರತದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಶೇ 50 ರಷ್ಟು ವಿವಿಪ್ಯಾಟ್ಗಳಲ್ಲಿನ ಮತಗಳನ್ನ ಇವಿಎಂ ಮತಗಳೊಂದಿಗೆ ತುಲನೆ ಮಾಡಬೇಕು ಎಂದು 21 ಪಕ್ಷಗಳು ಒತ್ತಾಯಿಸುತ್ತಿವೆ.
ಇದು ಭಾರತದ ಕಥೆಯಾದ್ರೆ, ಇಂಡೋನೇಷ್ಯಾ ಚುನಾವಣೆ ಫಲಿತಾಂಶದ ವಿಚಾರವಾಗಿಯೇ ಹೊತ್ತಿ ಉರಿಯುತ್ತಿದೆ. ಅಲ್ಲಿನ ಚುನಾವಣಾ ಆಯೋಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾವು ವೋಟ್ ಮಾಡಿರುವ ಅಭ್ಯರ್ಥಿ ಸೋತಿದ್ದಾರೆ. ಇದು ನಕಲಿ ಫಲಿತಾಂಶ ಎಂದು ಆರೋಪಿಸಿರುವ ಇಂಡೋನೇಷ್ಯಾ ಜನತೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಚುನಾವಣಾ ಫಲಿತಾಂಶ ಸಂಬಂಧ ನಡೆದ ಗಲಾಟೆಗಳಲ್ಲಿ ಈಗಾಗಲೇ ಹತ್ತಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿ ಜಕಾರ್ತಾದಲ್ಲಿ ಪ್ರತಿಭಟನೆಯ ಬಿಸಿ ಜೋರಾಗಿದ್ದು ಜನ ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ನಿವಾಸಿಗಳು ತಮ್ಮ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಗಳತ್ತ ಸಾಮೂಹಿಕ ವಲಸೆ ಹೋಗುತ್ತಿದ್ದಾರೆ.
ಗಲಾಟೆಗೆ ಕಾರಣ ಏನು?
ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೊಕೊ ವಿಡೊಡೊ ಶೇ. 55.5 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಆಯೋಗವು ಘೋಷಿಸಿದ್ದು, ಎದುರಾಳಿ ಅಭ್ಯರ್ಥಿ ಪ್ರಬ್ವೊ ಸುಬಿಯಂತೊ ಅವರನ್ನು ಸುಲಭವಾಗಿ ಮಣಿಸಿದ್ದಾರೆ. ಆದರೆ, ಈ ತೀರ್ಪು ನಕಲಿ, ದೇಶದಲ್ಲಿ ಮರು ಚುನಾವಣೆ ನಡೆಯಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕಲ್ಲಿ ಬೆಂಕಿ ಹೊತ್ತಿಸುತ್ತಿದ್ದಾರೆ. ಪ್ರತಿಭಟನೆಯ ಕಾವು ಜೋರಾಗಿದ್ದು, ಈವರೆಗೆ 20 ಮಂದಿಯನ್ನು ಸೆರೆಹಿಡಿಯಲಾಗಿದೆ.