ಕರ್ನಾಟಕ

karnataka

ETV Bharat / bharat

ಹರಿಓಂ.. ಬಡತನಕ್ಕೆ ಬಸವಳಿದ ಕ್ರೀಡಾಪಟು: ಚಹಾ ಮಾರಾಟಕ್ಕಿಳಿದ ವಿಶ್ವ ಕರಾಟೆ ಚಾಂಪಿಯನ್! - ಚಹಾ ಮಾರುವ ವಿಶ್ವ ಕರಾಟೆ ಚಾಂಪಿಯನ್

ವಿಶ್ವ ಕರಾಟೆ ಚಾಂಪಿಯನ್ ಹರಿಓಂ ಶುಕ್ಲಾ ತಮ್ಮ ಕಠಿಣ ಪರಿಶ್ರಮದಿಂದಾಗಿ ಅನೇಕ ದೇಶಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಜೀವನೋಪಾಯಕ್ಕಾಗಿ ಚಹಾ ಮಾರಾಟ ಮಾಡುವಂತಾಗಿದೆ.

hariom
hariom

By

Published : Jun 14, 2021, 5:12 PM IST

Updated : Jun 14, 2021, 8:21 PM IST

ಮಥುರಾ(ಉತ್ತರ ಪ್ರದೇಶ): ಹಲವಾರು ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಆದರೆ ದುರಂತವೆಂದರೆ ಇಂತಹ ಕ್ರೀಡಾಪಟುಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಹೌದು, ವಿಶ್ವ ಕರಾಟೆ ಚಾಂಪಿಯನ್ ಆಗಿರುವ ಉತ್ತರ ಪ್ರದೇಶದ ಹರಿಓಂ ಶುಕ್ಲಾ ಈಗ ಜೀವನೋಪಾಯಕ್ಕಾಗಿ ಚಹಾ ಮಾರಾಟ ಮಾಡುತ್ತಿದ್ದಾರೆ. 2013 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇವರು ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದಲ್ಲದೆ, ಅವರು ವಿವಿಧ ದೇಶಗಳಲ್ಲಿನ ಚಾಂಪಿಯನ್​ಶಿಪ್​ಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಚಹಾ ಮಾರುತ್ತಿರುವ ಕರಾಟೆ ಚಾಂಪಿಯನ್​ ಹರಿಓಂ

ಇದುವರೆಗೆ 60 ಪದಕಗಳನ್ನು ಗೆದ್ದಿದ್ದಾರೆ:

ಮಥುರಾ ಜಿಲ್ಲೆಯ ಇಸಾಪುರ ನಿವಾಸಿ ಹರಿಓಂ 2008ರಲ್ಲಿ ಕಠ್ಮಂಡುವಿನಲ್ಲಿ ನಡೆದ ಕರಾಟೆ ಪಂದ್ಯದಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಖ್ಯಾತಿ ತಂದುಕೊಟ್ಟರು. ನಂತರ ಥೈಲ್ಯಾಂಡ್​​ನಲ್ಲಿ ನಡೆದ ಕರಾಟೆ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳೆರಡನ್ನೂ ತಮ್ಮದಾಗಿಸಿಕೊಂಡರು. 2015 ರಲ್ಲಿ ಯುಎಸ್​​ನಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಬೆಳ್ಳಿ ಪದಕವನ್ನು ಗೆದ್ದರು, ನಂತರ ಶ್ರೀಲಂಕಾದಲ್ಲಿ ಮೊದಲ ಸೀನಿಯರ್​​ ಗೋಲ್ಡ್​ ಮೆಡಲ್ ಜಯಿಸಿದರು. ಅವರು ಈವರೆಗೆ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿದಂತೆ ಸುಮಾರು 60 ಪದಕಗಳಿಗೆ ಮುತ್ತಿಕ್ಕಿದ್ದಾರೆ. ವಿಶ್ವ ಚಾಂಪಿಯನ್ ಪದಕವನ್ನೂ ಗೆದ್ದಿದ್ದಾರೆ ಸಾಧಕ ಹರಿಓಂ.

ಹರಿಓಂ ಗೆದ್ದಿರುವ ಪದಕಗಳು

ಸರ್ಕಾರದಿಂದ ಯಾವುದೇ ನೆರವು ಇಲ್ಲ:

ಈಗ ಮಥುರಾ ನಗರದ ಖಾಸಗಿ ಆಸ್ಪತ್ರೆಯ ಬಳಿ ಚಹಾ ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದಾರೆ ಹರಿಓಂ. ಅನೇಕ ಸರ್ಕಾರಿ ಯೋಜನೆಗಳು ಕ್ರೀಡಾಪಟುಗಳಿಗೆ ನೆರವು ನೀಡುತ್ತವೆ ಎಂದು ಹೇಳಿಕೊಳ್ಳಲಾಗುತ್ತಾದರೂ ವಾಸ್ತವ ಕಥೆ ಏನು ಎಂಬುದನ್ನು ಹರಿಓಂ ಜೀವನ ಬಯಲಿಗೆಳೆಯುತ್ತಿದೆ. ಈ ಬಗ್ಗೆ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ ಕರಾಟೆ ಚಾಂಪಿಯನ್ ಹರಿಓಂ, ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಚಹಾ ಮಾರಾಟಕ್ಕೆ ಇಳಿಯಬೇಕಾಯ್ತು ಎಂದು ಹೇಳಿದರು. ಹಣ ಸಂಪಾದನೆ ಹಾಗೂ ಕುಟುಂಬಸ್ಥರನ್ನು ನೋಡಿಕೊಳ್ಳಲು ನನಗೆ ಚಹಾ ಮಾರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ರು.

ಈಡೇರದ ಭರವಸೆಗಳು.. ಚಾಯ್​​ವಾಲಾ ಆದ ಕರಾಟೆ ಚಾಂಪಿಯನ್​

"ನಾನು 2006 ರಿಂದ ಈ ಕ್ರೀಡೆಯನ್ನು ತೊಡಗಿಸಿಕೊಂಡಿದ್ದೇನೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದೇನೆ. ನನ್ನ ರಾಜ್ಯ ಮತ್ತು ದೇಶಕ್ಕಾಗಿ ಪ್ರಶಸ್ತಿ ತಂದುಕೊಟ್ಟರೂ ನನಗೆ ಕ್ರೀಡಾ ಕೋಟಾದಡಿ ಸರ್ಕಾರಿ ಕೆಲಸ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ನಾನು ಬೇರೆ ಬೇರೆ ರಾಜಕೀಯ ಮುಖಂಡರನ್ನು ಭೇಟಿಯಾಗಿ ಸಹಾಯ ಕೇಳಿದ್ದೇನೆ. ಆದರೆ ಆಶ್ವಾಸನೆಗಿಂತ ಹೆಚ್ಚೇನೂ ಸಿಗಲಿಲ್ಲ"ಎಂದು ಹರಿಓಂ ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆ ಕರಾಟೆ ಅಭ್ಯಾಸ ಮಾಡಿ ಬಳಿಕ ಚಹಾ ಮಾರಾಟದಲ್ಲಿ ತೊಡಗುವ ಹರಿಓಂ​​ಗೆ ಚಹಾ ಅಂಗಡಿ ಸಹ ಸ್ವಂತದ್ದಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರ ತಂದೆ "ಮೊದಲಿನಿಂದಲೂ ನನ್ನ ಮಗನಿಗೆ ಕ್ರೀಡೆಗಳ ಬಗ್ಗೆ ತುಂಬಾ ಒಲವು ಇದೆ ಮತ್ತು ಅನೇಕ ಪದಕಗಳನ್ನು ಗೆದ್ದಿದ್ದಾನೆ. ಆದರೆ ಯಾವುದೇ ರಾಜಕೀಯ ನಾಯಕರು ಅಥವಾ ಅಧಿಕಾರಿಗಳಿಂದ ನಮಗೆ ಯಾವುದೇ ರೀತಿಯ ಸಹಾಯ ದೊರೆತಿಲ್ಲ" ಎಂದು ಹರಿಓಂ ತಂದೆ ದೀನ್​ ದಯಾಳ್ ಅಳಲು ತೋಡಿಕೊಂಡರು.

Last Updated : Jun 14, 2021, 8:21 PM IST

ABOUT THE AUTHOR

...view details