ಹರಿಯಾಣ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಸೆಣಸಾಟ ನಡೆಸಿ ಭಾರತದ ಮಹಿಳಾ ತಂಡ ನಿರ್ಗಮಿಸಿದ ಹಿನ್ನೆಲೆಯಲ್ಲಿ ಹಾಕಿ ಆಟಗಾರ್ತಿ ನೇಹಾ ಗೋಯಲ್ ಅವರ ತಾಯಿ ಭಾವುಕರಾದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ನೇಹಾ ಗೋಯಲ್ ತಾಯಿ, ಸೋಲು-ಗೆಲುವು ಆಟದ ಒಂದು ಭಾಗ. ಈಗ ನಮ್ಮ ತಂಡ ಸೋತಿರಬಹುದು ಆದರೆ ಮುಂದೊಂದು ದಿನ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಮಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರ ತಂದೆ ಸಹ ಮಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಹಿಳಾ ಹಾಕಿ ತಂಡವು ಭಾರತದ ಹೆಣ್ಣುಮಕ್ಕಳನ್ನು ಹುರಿದುಂಬಿಸುವಂತೆ ಮಾಡಿದೆ. ನಮ್ಮ ಕ್ರೀಡಾಪಟುಗಳು ಮಾಡಿದ ಪ್ರಯತ್ನಕ್ಕೆ ನಾವು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ರಾಣಿ ಮನೆಗೆ ಹಿಂದಿರುಗಿದ ನಂತರ ಸಂತೋಷದಿಂದ ಸ್ವಾಗತಿಸಲಾಗುತ್ತದೆ ಎಂದರು.
ಗುರ್ಜಿತ್ ಕೌರ್ ಅವರ ಸಹೋದರ ಗುರ್ಚರಣ್ ಸಿಂಗ್ ಸಹ ಮಾಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಹುಡುಗಿಯರು ಇಲ್ಲಿಯವರೆಗೆ ತಲುಪುವುದನ್ನು ನೋಡುವುದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.