ಬರುಯಿಪುರ್ (ಪಶ್ಚಿಮ ಬಂಗಾಳ):ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಕೊಲೆ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲಿ ನೌಕಾಪಡೆಯ ಮಾಜಿ ನೌಕರರೊಬ್ಬರ ಹತ್ಯೆಯಾಗಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು ಆತನ ಮಗ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮೃತದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ನ ನಿವಾಸಿ ಉಜ್ಜಲ್ ಚಕ್ರವರ್ತಿ (54) ಎಂಬುವವರೇ ಕೊಲೆಯಾದ ವ್ಯಕ್ತಿ. ಈ ಮೊದಲು ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರು 2000ರಲ್ಲಿ ನಿವೃತ್ತಿ ಹೊಂದಿದ್ದರು. ಸದ್ಯ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ನ.14ರಂದು ಉಜ್ಜಲ್ ಚಕ್ರವರ್ತಿಯನ್ನು ಮನೆಯಲ್ಲೇ ಪತ್ನಿ ಮತ್ತು ಮಗ ಕೂಡಿಕೊಂಡು ಕೊಲೆ ಮಾಡಿದ್ದಾರೆ. ಇದನ್ನು ಮುಚ್ಚಿ ಹಾಕಲೆಂದು ಮರು ದಿನ ಅಂದ್ರೆ ನ.15ರಂದು ಉಜ್ಜಲ್ ಚಕ್ರವರ್ತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ಪತ್ನಿ ಮತ್ತು ಮಗ ದೂರು ನೀಡಿದ್ದರು.
ಕೊಲೆ ಮಾಡಿ ನಾಪತ್ತೆ ದೂರು ಕೊಟ್ಟಿದ್ದರು: ಉಜ್ಜಲ್ ಚಕ್ರವರ್ತಿ ನಾಪತ್ತೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗನೇ ಏನೋ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಆದ್ದರಿಂದ ದೂರು ಕೊಟ್ಟಿದ್ದ ತಾಯಿ ಹಾಗೂ ಮಗ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಉಜ್ಜಲ್ ಚಕ್ರವರ್ತಿಯನ್ನು ಕೊಲೆಗೈದ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.