ಹೈದರಾಬಾದ್ (ತೆಲಂಗಾಣ):ಕೈಮಗ್ಗ ಕಲಾವಿದರೊಬ್ಬರು ಚಿನ್ನ ಮತ್ತು ಬೆಳ್ಳಿಯಿಂದ ರೇಷ್ಮೆ ಸೀರೆಯನ್ನು ನೇಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಕೈಮಗ್ಗ ಕಲಾವಿದರಾದ ನಲ್ಲ ವಿಜಯ್ ಎಂಬವರು 20 ಗ್ರಾಂ ಚಿನ್ನ ಮತ್ತು 20 ಗ್ರಾಂ ಬೆಳ್ಳಿಯ ರೇಷ್ಮೆ ಸೀರೆಯನ್ನು ನೇಯುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಇವರು ತಯಾರಿಸಿದ ಈ ಸೀರೆ 48 ಇಂಚು ಅಗಲ, ಐದೂವರೆ ಮೀಟರ್ ಉದ್ದ ಮತ್ತು 500 ಗ್ರಾಂ ತೂಕವಿದೆ. ಇದರ ಬೆಲೆ 1.80 ಲಕ್ಷ ರೂ. ಆಗಿದೆ.
ಚಿನ್ನ ಮತ್ತು ಬೆಳ್ಳಿಯನ್ನು ತೆಳುವಾದ ದಾರದಂತೆ ಮಾಡಲು ಒಂದು ತಿಂಗಳು ಬೇಕಾಯಿತು. ಹೈದರಾಬಾದಿನ ಉದ್ಯಮಿಯೊಬ್ಬರ ಮಗಳ ಮದುವೆಗೆ ಸೀರೆಯನ್ನು ತಯಾರಿಸಿದ್ದಾಗಿ ವಿಜಯ್ ತಿಳಿಸಿದ್ದಾರೆ.
ಭಾರತವು ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯ ಮತ್ತು ವಿವಿಧತೆಯಲ್ಲಿ ಏಕತೆ ಹೊಂದಿದೆ. ದೇಶದ ಪ್ರತಿಯೊಂದು ರಾಜ್ಯವು ಮಿನಿ ಭಾರತದಂತೆ ಕಾಣುತ್ತದೆ. ಹಬ್ಬಗಳು, ಆಹಾರ ಮತ್ತು ಬಟ್ಟೆ ಎಲ್ಲವೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭಿನ್ನವಾಗಿದೆ. ವಿಶೇಷವಾಗಿ, ಪ್ರತಿಯೊಂದು ರಾಜ್ಯವು ತನ್ನದೇ ಆದ ಸಾಂಪ್ರದಾಯಿಕ ಉಡುಗೆ ಹೊಂದಿದೆ. ಒಬ್ಬ ವ್ಯಕ್ತಿ ಧರಿಸಿರುವ ಬಟ್ಟೆಗಳನ್ನು ನೋಡಿ ನಾವು ಅವರು ಯಾವ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಬಹುದು. ಜಗತ್ತಿನ ಯಾವ ದೇಶವೂ ಇಂತಹ ವೈವಿಧ್ಯತೆಯನ್ನು ಹೊಂದಿಲ್ಲ.